WhatsApp Image 2024-03-30 at 4.05.16 PM

ಕಡಿಮೆ ಮತದಾನವಾದ ಸ್ಥಳಗಳಲ್ಲಿ ಮತದಾನ ಜಾಗೃತಿ ಮೂಡಿಸಿ : ಶಿವರಾಜ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,30- ಕಂಪ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಡಿಮೆ ಮತದಾನಗೊಂಡ ಸ್ಥಳಗಳನ್ನು ಗುರುತಿಸಿ, ಅಲ್ಲಿ ಹೆಚ್ಚು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕಂಪ್ಲಿ ತಾಲ್ಲೂಕು ಸ್ವೀಪ್ ಅಧ್ಯಕ್ಷರು ಹಾಗೂ ತಹಶೀಲ್ದಾರ ಶಿವರಾಜ ಅವರು ಬಿಎಲ್‍ಓ, ಮತಗಟ್ಟೆ ಮೇಲ್ವಿಚಾರಕರು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಸೂಚಿಸಿದರು.

09-ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ ಶನಿವಾರ ಕಂಪ್ಲಿ ತಾಪಂ ಸಭಾಂಗಣದಲ್ಲಿ ಬಿಎಲ್‍ಓ, ಮತಗಟ್ಟೆ ಮೇಲ್ವಿಚಾರಕರು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಚಟುವಟಿಕೆಗಳನ್ನು ಬೂತ್ ಮಟ್ಟದಿಂದ ಚುರುಕುಗೊಳಿಸುವಂತೆ ತಿಳಿಸಿದರು.

ತಾಲ್ಲೂಕಿನಲ್ಲಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಮತದಾರರ ಜಾಗೃತಿ ಕುರಿತಂತೆ ತೀವ್ರತರವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಭವಿಷ್ಯದ ಮತದಾರರಿಗೆ ಹಾಗೂ ಹೊಸ ಮತದಾರರಿಗೆ ಅರಿವು ಮೂಡಿಸಲು ಸೂಚನೆ ನೀಡಿದರು.

ಮತದಾನ ಪ್ರಕ್ರಿಯೆಯಲ್ಲಿ ವಿಶೇಷ ಚೇತನರು, 85 ವರ್ಷಕ್ಕೂ ಮೇಲ್ಪಟ್ಟ ವಯಸ್ಕರೂ ಸೇರಿದಂತೆ ಪ್ರತಿಯೊಬ್ಬರೂ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.

ಪಾರದರ್ಶಕ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಪ್ರಕ್ರಿಯೆ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಿಕೆ ಕುರಿತಂತೆ ಸ್ಥಳೀಯ ಗ್ರಾಮೀಣ ಹಾಗೂ ನಗರ ಸಂಸ್ಥೆಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಪ್ರತ್ಯೇಕವಾಗಿ ಕ್ರಿಯಾಯೋಜನೆಗಳನ್ನು ತಯಾರಿಸಿಕೊಂಡು ಮತದಾರರ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದರು.

ತಾಲ್ಲೂಕು ಮಟ್ಟದ ಸ್ವೀಪ್ ಸಮಿತಿ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಮತದಾರರ ಪೂರ್ಣ ಪಟ್ಟಿಯನ್ನು ಹೊಂದಿರಬೇಕು. ಕಳೆದ ಚುನಾವಣೆಗಳಲ್ಲಿ ಮತದಾನ ಕಡಿಮೆಯಾಗಿರುವ ಬೂತ್‍ಗಳ ಮಾಹಿತಿಯನ್ನು ಹೊಂದಿರಬೇಕು ಎಂದು ತಹಶೀಲ್ದಾರ ಶಿವರಾಜ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!