
ಮೇ.7 ರಂದು ಎಲ್ಲರೂ ತಪ್ಪದೇ ಮತದಾನ ಮಾಡಿ : ಎಲ್.ವಿರೇಂದ್ರ ಕುಮಾರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಲು ಸ್ವೀಪ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಕನಕಗಿರಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಎಲ್.ವಿರೇಂದ್ರ ಕುಮಾರ್ ಅವರು ಹೇಳಿದರು.
ಕನಕಗಿರಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಎದುರು ಹನುಮಪ್ಪ ದೇಗುಲದ ಮೂಲಕ ವಾಲ್ಮೀಕಿ ವೃತ್ತದವರೆಗೆ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ಸೋಮವಾರ ಆಯೋಜಿಸಿದ್ದ ಸ್ವೀಪ್ ಮತದಾನ ಜಾಗೃತಿಯ ಬೈಕ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಚುನಾವಣೆ ಹಬ್ಬದಲ್ಲಿ ಖುಷಿಯಿಂದ ಪಾಲ್ಗೊಳ್ಳಬೇಕು. ಮತ ಚಲಾಯಿಸಲು ಯಾರೂ ಕೂಡ ನಿರ್ಲಕ್ಷ್ಯ ತೋರಬಾರದು. ಸದೃಢ ದೇಶ ಕಟ್ಟಲು ಶೇ.100 ರಷ್ಟು ಮತದಾನ ಆಗಬೇಕು. ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.
ನಂತರ ಪ.ಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ಮೇ.7ರಂದು ನಡೆಯುವ ಮತದಾನದಂದು ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಮತದಾನ ಪವಿತ್ರವಾದದ್ದು, ಯಾರೂ ಮತದಾನದಿಂದ ಹೊರಗುಳಿಯದೇ, ಮತ ಚಲಾಯಿಸುವಂತೆ ತಿಳಿಸಿದರು.
ನಂತರ ಅಂಬೇಡ್ಕರ್ ವೃತ್ತದ ಮೂಲಕ ಶುರುವಾದ ಬೈಕ್ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ಅಧಿಕಾರಿಗಳು ಮತದಾನದ ಕುರಿತು ಜಾಗೃತಿಯನ್ನು ಮೂಡಿಸಿದರು.
ಇದೇ ವೇಳೆ ಬಸ್ ನಿಲ್ದಾಣದಲ್ಲಿ ಪ್ರಯಾಣೀಕರಿಗೆ ಮತದಾನದ ಕುರಿತು ಅರಿವು ಮೂಡಿಸಿ, ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಕಂದಕೂರ್ ಅವರು ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ವೇಳೆ ಸಿಡಿಪಿಓ ವಿರುಪಾಕ್ಷಿ, ತಾ.ಪಂ ಸಹಾಯಕ ನಿರ್ದೇಶಕ ವೀರಣ್ಣ ನಕ್ರಳ್ಳಿ ಸೇರಿದಂತೆ ತಾಪಂ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ಎಲ್ಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.