ಕರಡಿಗಳ ದಾಳಿ ಕಲ್ಲಂಗಡಿ ಬೆಳೆನಾಶ ರೈತರಿಗೆ ಸಂಕಷ್ಟ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 24- ತಾಲ್ಲೂಕಿನ ಹುಣಸಿಹಾಳ ಮತ್ತು ಗುನ್ನಾಳ ಗ್ರಾಮಗಳ ಸುತ್ತಮುತ್ತಲಿನ ರೈತರ ಹೊಲಗಳಲ್ಲಿ ಕರಡಿಗಳ ದಾಳಿಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ.
ಗ್ರಾಮದ ರೈತ ವೆಂಕಟೇಶ ರಾಮಪ್ಪ ವಾಲ್ಮೀಕಿ ಇವರ ಸರ್ವೆ ನಂಬರ 142 ರ ಹೊಲದಲ್ಲಿ ಗುತ್ತಿಗೆ ಪಡೆದು ಸಾಗುವಳಿ ಮಾಡುತಿದ್ದ ಹನುಮಂತಪ್ಪ ಸಂಗನಾಳ ಹೊಲಕ್ಕೆ ದಾಳಿ ಮಾಡಿದ ಕರಡಿಗಳು ಬೆಳೆದು ನಿಂತ ಕಲ್ಲಂಗಡಿ ಹಣ್ಣುಗಳನ್ನು ತಿಂದು, ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡಿವೆ.
ಗ್ರಾಮದ ಸುತ್ತ ಮುತ್ತಲಿನ ಪ್ರದೇಶಗಳ ಗ್ರಾಮಗಳಾದ ಸೂಳಕೇರಿ ಹಾಸಗಲ್.ಚಿಲ್ಕಮುಖಿ ಇರಕಲ್ ಗಡ ಗುಡ್ಡಗಾಡಿನಿಂದ ಕರಡಿಗಳು ಇಲ್ಲಿ ಬಂದು ,ಇಲ್ಲಿ ಕರಡಿಗಳು ಓಡಾಡುವುದು ಹೊಸದೇನಲ್ಲ. ಆದರೆ ಪ್ರತಿ ಸಾರಿ ಕರಡಿಗಳು ಹೊಲಗಳಿಗೆ ದಾಳಿ ಮಾಡುತ್ತಿದ್ದು ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ಹೇಗೆ ಎಂಬುದು ರೈತರಿಗೆ ಸವಾಲಾಗಿದೆ.
ರಾತ್ರಿ ಕರಡಿಗಳು ಹೊಲದಲ್ಲಿ ದಾಳಿ ಮಾಡುವ ಮೂಲಕ ಬೆಳದ ಬೆಳೆಗಳನ್ನೆಲ್ಲ ನಾಶಪಡಿಸಿ ಲಕ್ಷಾಂತರ ರೂಪಾಯಿಗಳು ಬೆಳೆ ನಷ್ಟ ವಾಗಿದೆ . ಹೊಲದಲ್ಲಿರುವ ಕಲ್ಲಂಗಡಿ ಬೆಳೆಗಳು ನಾಶಗೊಂಡಿವೆ.
ಕರಡಿ ಕಾಟಕ್ಕೆ ಬೇಸತ್ತ ರೈತರು ರಾತ್ರಿ ಕಾವಲು ಕಾಯ್ದು ಓಡಿಸಲು ಹೋದರೆ ಸಣ್ಣ ಸಣ್ಣ ಮರಿಗಳನ್ನು ಹೊಂದಿರುವ ಕರಡಿಗಳು ಮರುದಾಳಿ ಮಾಡುತ್ತಿರುವು ದರಿಂದ ರೈತರು ದಿಕ್ಕು ತೋಚದಂತಾಗಿದೆ ಎಂದು ರೈತ ಹನಮಂತಪ್ಪ ಸಂಗನಾಳ ಹೇಳಿದರು.
ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಕರಡಿಗಳಿದ್ದು, ಯಾವಾಗ ಹೊಲಗಳಿಗೆ ನುಗ್ಗಿ ಬೆಳೆಗಳ ಮೇಲೆ ದಾಳಿ ಮಾಡುತ್ತವೆ ಎಂಬುದು ತಿಳಿಯದಾಗಿದೆ. ಕರಡಿಗಳ ಹತೋಟಿಗೆ ಸಂಬಂಧಿಸಿದ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಾಶವಾದ ಕಲ್ಲಂಗಡಿ ಹಣ್ಣಿನ ಬೆಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

