
ಕಾರ್ಮಿಕ ಇಲಾಖೆಯಿಂದ ವಿವಿಧ ಯೋಜನೆಗಳ ಅನುಷ್ಠಾನ : ಸದುಪಯೋಗಕ್ಕೆ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ಕಾರ್ಮಿಕ ಇಲಾಖೆಯಡಿ ಬರುವ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಈ ಮೂರು ಮಂಡಳಿಗಳ ಮೂಲಕ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದ್ದು, ಅರ್ಹ ಕಾರ್ಮಿಕರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಚಿ ಗರಗ ಅವರು ತಿಳಿಸಿದ್ದಾರೆ.
*ಕರ್ನಾಟಕ ಕಾರ್ಮಿಕ ಕಲ್ಯಾಣಮಂಡಳಿ (ಕಕಾಕಮಂ)ಯ ಯೋಜನೆಗಳು:* ಈ ಮಂಡಳಿಯಡಿ ಶಿಕ್ಷಣಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳು ದುಡಿಯುವ ಕಾರ್ಮಿಕರು ಅನ್ವಯಿಸುತ್ತಾರೆ. ಅಂತಹ ಕಾರ್ಮಿಕರಿಗೆ ವೈದ್ಯಕೀಯ ಸಹಾಯಧನ ಹಾಗೂ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೌಲಭ್ಯವಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
*ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (ಕಕಇನಿಕಾಕಮಂ):* ಈ ಮಂಡಳಿಯಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಾತ್ರ ನೋಂದಣಿ ಮಾಡಿಕೊಳ್ಳಬಹುದಾಗಿದೆ ಹಾಗೂ ಕಾಲ ಕಾಲಕ್ಕೆ ವಿವಿಧ ಯೋಜನೆಗಳ ಸೌಲಭ್ಯ ಪಡೆಯಬಹುದಾಗಿದ್ದು, ಶೈಕ್ಷಣಿಕ ಧನಸಹಾಯ, ಅಪಘಾತಪರಿಹಾರ, ಪ್ರಮುಖ ವೃದ್ಯಕೀಯ ಸಹಾಯಧನ, ತಾಯಿ-ಮಗು ಸಹಾಯಹಸ್ತಾ, ದುರ್ಬಲತೆ ಪಿಂಚಣಿ ಹಾಗೂ ವಯೋವೃದ್ದ ಪಿಂಚಣಿ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಮದುವೆ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯಗಳು ಸಿಗಲಿವೆ.
*ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ (ಕರಾಅಕಾಸಾಭಮಂ):* ಈ ಮಂಡಳಿಯಡಿ 46 ವಲಯಗಳ ಅಸಂಘಟಿತ ಕಾರ್ಮಿಕರು ಇ-ಶ್ರಮ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಇದರಡಿ 11 ಅಸಂಘಟಿತ ವಲಯದ ಕಾರ್ಮಿಕರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅನ್ವಯಿಸುತ್ತದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಎಸ್.ಸಿ & ಎಸ್.ಟಿ ಕಾರ್ಮಿಕರಿಗೆ ಆಶಾದೀಪ ಯೋಜನೆ ಅನ್ವಯ. ಅಸಂಘಟಿತ ವಲಯದಲ್ಲಿರುವ ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿರುವ ಚಾಲಕರಿಗೆ ಅಪಘಾತ ಪರಿಹಾರ ಮತ್ತು ಅವರ ಮಕ್ಕಳಿಗೆ ಶಿಕ್ಷಣ ಪ್ರಯೋಜನ ಯೋಜನೆ ಸಿಗಲಿದೆ. ಇದಲ್ಲದೇ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಹೊಸ ಪಿಂಚಣಿಯು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್(ಪಿ.ಎಂ.ಎಸ್.ವೈ.ಎಂ) ಯೋಜನೆಯಲ್ಲಿ ದೊರೆಯಲಿದೆ.
ಈ ಎಲ್ಲಾ ಯೋಜನೆಗಳಡಿ ಅರ್ಹ ಕಾರ್ಮಿಕರು ನೋಂದಾಯಿಸಿಕೊಂಡು ಹಾಗೂ ಕಾಲ ಕಾಲಕ್ಕೆ ವೆಬ್‌ಸೈಟ್ http://kbocwwb.karnataka.gov.in ನಲ್ಲಿ ಅರ್ಜಿ ಸಲ್ಲಿಸಿ, ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ ಕೊಪ್ಪಳ. ಕಾರ್ಮಿಕ ನಿರೀಕ್ಷಕರ ಕಛೇರಿ ಕೊಪ್ಪಳ ವೃತ್ತ ಕೊಪ್ಪಳ, ಕಾರ್ಮಿಕ ನಿರೀಕ್ಷಕರುಗಳ ಕಚೇರಿ ಕುಷ್ಟಗಿ, & ಗಂಗಾವತಿಗೆ ಭೇಟಿ ನೀಡಿ ತಿಳಿದುಕೊಳ್ಳಬಹುದಾಗಿರುತ್ತದೆ ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.