IMG-20240228-WA0041

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನರ ಬೃಹತ್ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ 

ಬಳ್ಳಾರಿ,28- ಬೃಹತ್ ಮೆರವಣಿಗೆಯು ನಗರದ ಗಾಂಧಿ ಭವನದಿಂದ ಹೊರಟು ರಾಯಲ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿತು. ಮೆರವಣಿಗೆಯಲ್ಲಿ ವಿವಿಧ ಬಡಾವಣೆಗಳಿಂದ ನೂರಾರು ಮಹಿಳೆಯರು, ವಿದ್ಯಾರ್ಥಿಗಳು, ರೈತ-ಕಾರ್ಮಿಕರು, ಭಾಗವಹಿಸಿದ್ದರು. ಮತ್ತು ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.

 

ಈ ಸಂದರ್ಭದಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ರಾಧಾಕೃಷ್ಣ ಉಪಾಧ್ಯಾ ಮಾತನಾಡುತ್ತಾ ಪ್ರತಿ ಐದು ವರ್ಷದಂತೆ ಈ ಬಾರಿಯೂ ಚುನಾವಣೆ ಸಮೀಪಿಸುತ್ತಿದೆ.ದೊಡ್ಡ ದೊಡ್ಡ ಘೋಷಣೆಗಳೊಂದಿಗೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ತಯಾರಾಗುತ್ತಿವೆ. ಏನೇ ದೊಡ್ಡ ಘೋಷಣೆಗಳು ಇದ್ದರೂ, ಜನರು ತಮ್ಮ ಜೀವನದಲ್ಲಿ ಸ್ವಲ್ಪ ಮಾತ್ರವೂ ಸುಧಾರಣೆಯನ್ನು ಕಾಣುತ್ತಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಖಾಸಗೀಕರಣಗೊಂಡು ಜನಗಳ ಕೈಗೆಟುಕದಂತಾಗಿವೆ. ಉದ್ಯೋಗವಿಲ್ಲದೆ ಯುವಜನತೆ ಪರದಾಡುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ಇತ್ತ ಕೇಂದ್ರ ಮೋದಿ ಸರ್ಕಾರ ಈಗ ಅದರ ಬಗ್ಗೆ ಮಾತೇ ಎತ್ತುತ್ತಿಲ್ಲ. ಇನ್ನು ಕಾಯಂ ಉದ್ಯೋಗದ ಮಾತು ಕನಸಾಗಿಯೇ ಉಳಿದಿದೆ. ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಇಳಿಯುವ ಸೂಚನೆಯೇ ಕಾಣುತ್ತಿಲ್ಲ. ಇದರಿಂದಾಗಿ ಜನತೆಯ ಬದುಕು ಬೀದಿಗೆ ಬರುವಂತಾಗಿದೆ. ಈ ವಿಷಯಗಳ ಬಗ್ಗೆ ಮಾತನಾಡುವ ಬದಲು ಜಾತಿ-ಧರ್ಮದಂತಹ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಜನರ ನೈಜ ಸಮಸ್ಯೆಗಳನ್ನು ಮರೆ ಮಾಚುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನದಲ್ಲಿದೆ. ಇನ್ನೊಂದು ಕಡೆ ದೇಶದ ಶೇ.77 ರಷ್ಟು ಸಂಪತ್ತು ಶೇ.10 ಮಂದಿ ಶ್ರೀಮಂತರ ಕೈಗಳಲ್ಲಿದೆ ಎಂದು ವರದಿಯಾಗಿದೆ. ಶ್ರೀಮಂತ ಕಾರ್ಪೊರೇಟ್ ಕಂಪನಿಗಳ ಆಶೀರ್ವಾದದಿಂದ ಅಧಿಕಾರಕ್ಕೆ ಬರುವ ಎಲ್ಲಾ ರಾಜಕೀಯ ಪಕ್ಷಗಳು ಅವರ ಪರವಾಗಿ ತರುವ ನೀತಿಗಳಿಂದಾಗಿ ದೇಶ ಈ ಸ್ಥಿತಿಗೆ ಬಂದಿದೆ.ಇಂದು ವಿಶ್ವಗುರು ಆಗಲು ಹೊರಟಿರುವ ಭಾರತದ ಪರಿಸ್ಥಿತಿ ಇದು ಜನಗಳು ಚುನಾವಣಾ ಪ್ರವಾಹದಲ್ಲಿ ಕೊಚ್ಚಿ ಹೋಗದೆ ಈ ರಾಜಕೀಯ ಪಕ್ಷಗಳ ಮುಖವಾಡಗಳನ್ನು ಅರ್ಥ ಮಾಡಿಕೊಂಡು ಈ ಶೋಷಣಾಯುಕ್ತ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.

 

ಎಸ್ ಯು ಸಿ ಐ ನ ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೇಡ್ ಎ.ದೇವದಾಸ್ ರಾಜ್ಯದಲ್ಲಿ ಬರ ಬರುತ್ತಿದೆ. ಕುಡಿಯಲು ನೀರಿಲ್ಲದೆ ಜನಗಳು ಪರದಾಡುವಂತಾಗಿದೆ. ಬೆಳೆದ ಬೆಳೆ ಕೈಗು ಬರದೇ ,ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.ರೈತರ ಬೆಳೆಗಳಿಗೆ ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರ ಸರ್ಕಾರ ತಾನೇ ನೀಡಿದ ಭರವಸೆಯನ್ನು ಗಾಳಿಗೆ ತೂರಿದೆ. ಗ್ರಾಮೀಣ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಉದ್ಯೋಗ ನೀಡುವ ನರೇಗಾ ಯೋಜನೆ ಕೂಡ ಸರಿಯಾಗಿ ಅನುಷ್ಠಾನಗೊಳ್ಳದೆ ಹಲವಾರು ಲೋಪದೋಷಗಳಿಂದ ಕೂಡಿದೆ. ಇನ್ನು ಕಾರ್ಮಿಕರ ಜೀವನವಂತೂ ಆಧೋಗತಿಗೆ ಹೋಗಿದೆ. ಸರಿಯಾದ ಸಂಬಳ, ಸೇವಾ ಭದ್ರತೆ ಇಲ್ಲದೆ ಗುಲಾಮರ ರೀತಿ ಕೆಲಸ ಮಾಡುತ್ತಿದ್ದಾರೆ. ಹೋರಾಟದಿಂದ ಗಳಿಸಿಕೊಂಡ ಹಕ್ಕುಗಳನ್ನು ಕೂಡ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವುದರ ಮೂಲಕ ಕೇಂದ್ರ ಸರ್ಕಾರ ಕಸಿದುಕೊಳ್ಳಲು ಹೊರಟಿದೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ರೈತರು- ಕಾರ್ಮಿಕರು ಸೇರಿದಂತೆ ಎಲ್ಲಾ ದಮನಿತ ಜನತೆ ಒಂದಾಗಬೇಕು.ತಮ್ಮ ಪರವಾಗಿರುವ ಸಮಾಜ ಸಮಾಜವಾದಿ ಸಮಾಜವನ್ನು ತರಲು ಮುನ್ನುಗ್ಗಬೇಕು” ಎಂದು ಹೇಳಿದರು.

 

ಎಸ್ ಯು ಸಿ ಐ(ಸಿ)ನ ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೆಡ್ ಎಂ.ಎನ್.ಮಂಜುಳಾ ಬೇಟಿ ಬಚಾವೋ ಬೇಟಿ ಪಡಾವೋ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮೋದಿ ಸರ್ಕಾರದ ಘೋಷಣೆಗಳು ಕೇವಲ ಘೋಷಣೆಗಳಾಗಿವೆ. ಮಹಿಳೆಯರ,ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೆ ಇವೆ. ಈ ದೌರ್ಜನ್ಯಗಳನ್ನು ತಡೆಗಟ್ಟಲು ಯಾವುದೇ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿಲ್ಲ. ಇಂತಹ ಪರಿಸ್ಥಿತಿಯ ವಿರುದ್ಧ ಪ್ರಬಲ ಹೋರಾಟ ಒಂದೇ ದಾರಿ. ಈ ದಾರಿಯಲ್ಲೇ ಜನಗಳು ಮುನ್ನಡೆಯಬೇಕು ಎಂದು ಹೇಳಿದರು.

ನಿವೃತ್ತ ಉಪನ್ಯಾಸಕರಾದ ಶ್ರೀ ನರಸಣ್ಣ ಅವರು ಜನ ಸಮಸ್ಯೆಗಳ ಕುರಿತು ಮಾತನಾಡಿದರು.

ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೇಡ್ ಡಾ.ಪ್ರಮೋದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ನಾಗಲಕ್ಷ್ಮಿ, ಸೋಮಶೇಖರ್ ಗೌಡ, ಶಾಂತ, ಗೋವಿಂದ ಪದಾಧಿಕಾರಿಗಳಾದ ನಾಗರತ್ನ, ಪಂಪಾಪತಿ ಕೋಳೂರು,ಹನುಮಪ್ಪ, ಈಶ್ವರಿ, ಜಗದೀಶ್ , ರಾಜ, ವಿಜಯಲಕ್ಷ್ಮಿ, ರವಿಕಿರಣ್ ಮತ್ತಿತರರು ಹಾಗೂ ಹಲವಾರು ಬಡಾವಣೆಯ ,ಹಳ್ಳಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!