
ಕೊಪ್ಪಳಕ್ಕೆ ಮಾರ್ಚ್ 7 ಮತ್ತು 8 ರಂದು
ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 05- ಮಾರ್ಚ್ 7 ಮತ್ತು 8 ರಂದು ಶೃಂಗೇರಿ ಶಾರದಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ಎಂದು ಶ್ರೀ ಶಂಕರ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಕೃಷ್ಣ ಪದಕಿ ತಿಳಿಸಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಮಾ.7ರಂದು ಸಂಜೆ 6 ಗಂಟೆಗೆ ನಗರದ ಈಶ್ವರ ಪಾರ್ಕ್‌ನಿಂದ ಕಿನ್ನಾಳ ರಸ್ತೆಯಲ್ಲಿರುವ ವಾಸವಿ ಮಂಗಲಭವನದ ತನಕ ಶೋಭಾಯಾತ್ರೆ ನಡೆಯಲಿದೆ. ಬಳಿಕ ದೂಳಿಪಾದ ಪೂಜೆ, ಫಲ ಸಮರ್ಪಣೆ, ಬಿನವತ್ತಳೆ ಅರ್ಪಣೆ ಜರುಗಲಿದೆ. ಕೊನೆಯಲ್ಲಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ’ ಎಂದರು.
‘ಮಾರ್ಚ 8ರಂದು ಬೆಳಿಗ್ಗೆ 8 ಗಂಟೆಗೆ ಮಠದ ಅರ್ಚಕರಿಂದ ಚಂದ್ರಮೌಳೇಶ್ವರ ಪೂಜೆ, 10 ಗಂಟೆಗೆ ಕುಷ್ಟಗಿ ರಸ್ತೆಯಲ್ಲಿರುವ ಪದಕಿ ಟೌನ್‌ಷಿಪ್ ಬಡಾವಣೆಯಲ್ಲಿ ಶಂಕರಮಠದ ನೂತನ ಕಟ್ಟಡದ ಭೂಮಿಪೂಜೆ ನೆರವೇರಲಿದೆ. ಬಳಿಕ ಶ್ರೀಗಳಿಗೆ ಭಕ್ತರಿಂದ ಪಾದುಕಾ ಪೂಜೆ, ವಸ್ತ್ರ ಸಮರ್ಪಣೆ, ಪ್ರಸಾದ, ಫಲ ಮಂತ್ರಾಕ್ಷತೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
‘ಸನಾತನ ಹಿಂದೂ ಧರ್ಮದ ಜಾಗೃತಿಗಾಗಿ ದೇಶದ ಅನೇಕ ಕಡೆಗಳಲ್ಲಿ ಶ್ರೀಗಳು ವಿಜಯಯಾತ್ರೆ ನಡೆಸುತ್ತಿದ್ದಾರೆ. ಹಿಂದೂ ಸಮಾಜದ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು’ಎಂದು ಹೇಳಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ದತ್ತಣ್ಣ ಜೋಷಿ, ಉಪಾಧ್ಯಕ್ಷ ವೆಂಕಟೇಶ ಜೋಷಿ, ಖಜಾಂಚಿ ಶ್ರೀನಿವಾಸ ಅಶ್ವತ್ಥಪುರ, ಕಾರ್ಯಕಾರಿ ಸಮಿತಿ ಸದಸ್ಯ ಸುರತೇಶ ನಾಡಿಗೇರ, ವಿಜಯಕುಮಾರ ಪದಕಿ ಇತರರು ಇದ್ದರು.