
ಕ್ರೀಡೆಯಿಂದ ಆರೋಗ್ಯ ವೃದ್ಧಿ : ಡಾ.ಹೆಚ್.ಡಿ.ಕೃಷ್ಣಪ್ಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 29- ಕ್ರೀಡೆಯು ಸ್ಪರ್ಧಾತ್ಮಕವಾಗಿದೆ, ಕೇವಲ ಆಟವಾಡುವುದಷ್ಟೇ ಅಲ್ಲ, ಆರೋಗ್ಯಕರವಾಗಿರಲು ಮತ್ತು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ ಎಂದು ಭಾರತದ ವಾಲಿಬಾಲ್ ತಂಡದ ಮಾಜಿ ಮುಖ್ಯ ತರಬೇತುದಾರರು, ಭಾರತೀಯ ಕ್ರೀಡಾ ಪ್ರಾಧಿಕಾರ ನಿವೃತ್ತ ಮುಖ್ಯ ವಾಲಿಬಾಲ್ ತರಬೇತುದಾರರು ಹಾಗೂ ಪ್ಯಾರಿಸ್ ಓಲಂಪಿಕ್ಸ-2024 ನಾಮನಿರ್ದೇಶಿತರಾದ ಡಾ.ಹೆಚ್.ಡಿ.ಕೃಷ್ಣಪ್ಪ ಅವರು ಹೇಳಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗ, ಕರ್ನಾಟಕ ವಾಲಿಬಾಲ್ ಸಂಸ್ಥೆ ಬೆಂಗಳೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಸಹಯೋಗದೊಂದಿಗೆ ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆ ಹಾಗೂ ಹೊಸ ನಿಯಮಗಳ ಕುರಿತು ಕಾರ್ಯಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಆಟಗಾರರನ್ನು ನಿರ್ಮಾಣ ಮಾಡುತ್ತವೆ. ಪರಿಶ್ರಮದ ಮೂಲಕ ತಂಡದ ಮೌಲ್ಯವನ್ನು ಹೆಚ್ಚಿಸುತ್ತವೆ. ಟೋಕಿಯೊನ ಒಲಂಪಿಕ್‍ನಿಂದ ಪ್ರಾರಂಭವಾದ ವಾಲಿಬಾಲ್ ಆಕರ್ಷಣೀಯ ಕ್ರೀಡೆಯಾಗಿದೆ. ಪ್ರಸ್ತುತವಾಗಿ ಬ್ರೆಜಿಲ್, ಕ್ಯೂಬಾ ಮತ್ತು ಚೀನಾ ವಾಲಿಬಾಲ್ ಕ್ರೀಡೆಯಲ್ಲಿ ಹೆಚ್ಚು ಬೆಳೆದಿವೆ ಎಂದು ಹೇಳಿದರು.
ವೀರಶೈವ ಮಹಾವಿದ್ಯಾಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಗೌಡ ಅವರು ಮಾತನಾಡಿ, ವಾಲಿಬಾಲ್ ಪ್ರದರ್ಶನ ಕ್ರೀಡೆಯಾಗಿ ಒಲಂಪಿಕ್ಸ್‍ನಲ್ಲಿ ಜನಪ್ರಿಯವಾಗಿದೆ. ವಾಲಿಬಾಲ್ ತನ್ನದೆ ಆದ ನಿಬಂಧನೆಯಲ್ಲಿದೆ. ಭಾರತ ವಾಲಿಬಾಲ್ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಏಷ್ಯಿಯನ್ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದು, ವಾಲಿಬಾಲ್ ಕ್ರೀಡೆಯಲ್ಲಿ ಹಲವಾರು ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಕ್ರೀಡಾ ವಿದ್ಯಾರ್ಥಿಗಳು ಅವುಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತಿಪ್ಪೇರುದ್ರಪ್ಪ ಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಪಟುಗಳು ಒಳ್ಳೆಯ ವರ್ತನೆಗಳನ್ನು ಅಳವಡಿಸಿಕೊಳ್ಳಬೇಕು. ಅವರ ವರ್ತನೆಗಳು ಕ್ರೀಡಾಪಟುಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು, ಕರ್ನಾಟಕ ವಾಲಿಬಾಲ್ ಸಂಸ್ಥೆಯ ನಿರ್ಣಾಯಕ ಬೋರ್ಡ್‍ನ ಸಂಚಾಲಕರಾದ ವೆಂಕಟೇಶ್ ಹಾಗೂ ನಾರಾಯಣಸ್ವಾಮಿ, ಚೌಡಾಪುರ್, ಚಿಕ್ಕನಂಜಯ್ಯ, ವಿಜಯನಗರ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಡಾ.ಪ್ರವೀಣ ಸಿಂಗ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕರಾದ ಡಾ. ಶಶಿಧರ ಕೆಲ್ಲೂರ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ ದೈಹಿಕ ಶಿಕ್ಷಕರು, ವೃತ್ತಿಬಾಂಧವರು ಹಾಗೂ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.