ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಬಳ್ಳಾರಿ ವತಿಯಿಂದ ಟಿ.ರಾಘವಾಚಾರ್ಯರ ಸ್ಮಾರಕ ದತ್ತಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,16- ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ಟಿ.ರಾಘವಾಚಾರ್ಯರ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆದರ್ಶ ವಿದ್ಯಾಲಯದ ಪ್ರಭಾರಿ ಮುಖ್ಯ ಗುರುಗಳಾದ ಕುಮಾರಸ್ವಾಮಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ, ನಿವೃತ್ತ ಉಪನ್ಯಾಸಕರಾದ ಎಂ. ರಾಮಾಂಜನೇಯಲು ಹಾಗೂ ಖ್ಯಾತ ರಂಗ ಕಲಾವಿದರಾದ ಪುರುಷೋತ್ತಮ್ ಹಂದಿಹಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಗೌರವ ಕಾರ್ಯದರ್ಶಿಗಳಾದ ಶ್ರೀ ಎನ್ ಪ್ರಕಾಶ್ ರವರು ಉದ್ಘಾಟಿಸಿ ತಮ್ಮ ಉದ್ಘಾಟನಾ ನುಡಿಯಲ್ಲಿ ಇಂದಿನ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅನಿವಾರ್ಯ. ಬಳ್ಳಾರಿ ಹಲವಾರು ರಂಗ ಕಲಾವಿದರನ್ನು ಈ ನಾಡಿಗೆ ಕೊಟ್ಟಂತಹ ಪ್ರದೇಶವಾಗಿದೆ, ನೀವು ವಿದ್ಯೆಯ ಜೊತೆಗೆ ವಿನಯವನ್ನು ಬೆಳೆಸಿಕೊಂಡು ನಾಡಿಗೆ ಕೀರ್ತಿ ತರುವ ಮಕ್ಕಳಾಗಿ ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ನುಡಿದರು.
ದತ್ತಿ ಉಪನ್ಯಾಸವನ್ನು ನೀಡಿದ ವಶಿಷ್ಠ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಡಿ. ಕರಿಯಪ್ಪ ರವರು ತಮ್ಮ ಉಪನ್ಯಾಸದಲ್ಲಿ ಬಳ್ಳಾರಿ ರಾಘವ ರವರ ಸಾಧನೆ ಅವರು ಬೆಳೆದು ಬಂದ ದಾರಿ, ಅವರಿಗೆ ಕಲಾ ಶಾರದೆ ಒಲಿದು ಬಂದ ಪರಿಯನ್ನು ತಿಳಿಸುತ್ತಾ ಶ್ರೀಯುತ ರಾಘವ ರವರು ತಮಗೆ ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತಿದ್ದರು, ನಟನ ಕೌಶಲ್ಯವನ್ನು ಹೊಂದಿದ ಇವರು ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯಾಗಿದ್ದರು, ಇವರ ರಂಗ ಕಲೆಗೆ ಹಲವಾರು ಪ್ರಶಸ್ತಿಗಳು ಹರಸಿ ಬಂದವು ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ.ವಿ. ಅವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಆದರ್ಶ ವಿದ್ಯಾಲಯದ ಮಕ್ಕಳು ನೃತ್ಯದ ಜೊತೆಗೆ ಪ್ರಾರ್ಥನಾ ಗೀತೆಯನ್ನು ನಡೆಸಿಕೊಟ್ಟರು.
ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಕಾರ್ತಿಕ್ ಮರಿಸ್ವಾಮಿ ಮಠ ರವರು ಗಣ್ಯ ಮಾನ್ಯರನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು, ಈ ಸಂದರ್ಭದಲ್ಲಿ ಅತಿಥಿಗಳನ್ನು ಉದ್ಘಾಟಕರನ್ನು ಗೌರವಿಸಲಾಯಿತು, ಶ್ರೀಮತಿ ಆರ್ ವೀಣಾ ರವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು, ತಾಲೂಕು ಘಟಕದ ಕೋಶಾಧ್ಯಕ್ಷರಾದ ಶರಣಬಸವ ರವರು ಕೊನೆಗೆ ವಂದಿಸಿದರು. ಈ ಕಾರ್ಯಕ್ರಮದಲ್ಲಿ 15 ಜನ ಶಿಕ್ಷಕರು 400 ವಿದ್ಯಾರ್ಥಿಗಳು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೆ ಸಾಕ್ಷಿಯಾದರು.
