05 TVR 01

ತಾವರಗೇರಾ : ಮಣ್ಣೆತ್ತಿನ ಅಮವಾಸ್ಯೆ ಆಚರಣೆ

ಕರುನಾಡ ಬೆಳಗು ಸುದ್ದಿ

ತಾವರಗೇರಾ, 5- ಇಂದಿನ ದಿನಗಳಲ್ಲಿ ಆಧುನಿಕತೆಯಿಂದಾಗಿ ಹಬ್ಬಗಳ ಆಚರಣೆಯಲ್ಲೂ ಬದಲಾವಣೆಗಳಾಗಿದ್ದು, ಶುಕ್ರವಾರ ಆಚರಿಸಲಾದ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಪೂಜಿಸುವ ಮಣ್ಣಿನ ಎತ್ತುಗಳ ಬದಲಿಗೆ ಬಣ್ಣ ಬಣ್ಣದಿಂದ ಕೂಡಿದ ಅನ್ಯ ರಾಜ್ಯದಲ್ಲಿ ತಯಾರಿಸಿದ ಪಿಒಪಿ ಎತ್ತುಗಳು ಪಟ್ಟಣಕ್ಕೆ ಆಗಮಿಸಿದ್ದು, ಮಾರಾಟ ಜೋರಾಗಿದೆ.

ಮಣ್ಣೆತ್ತಿನ ಅಮವಾಸ್ಯೆ ಸಮೀಪಿಸುತ್ತಿದ್ದಂತೆ ಇಲ್ಲಿನ ಕುಂಬಾರ ಕುಟುಂಬದವರು ಕೆರೆಗಳತ್ತ ಸಾಗಿ ಮಣ್ಣು ತಂದು ಎತ್ತುಗಳನ್ನು ತಯಾರಿಸುತ್ತಿದ್ದರು.

ಆಧುನಿಕ ಭರಾಟೆ ಕಾರಣ ಇಲ್ಲಿನ ಹಲವು ಕುಂಬಾರ ಕುಟುಂಬಗಳು ವೃತ್ತಿಯಿಂದ ವಿಮುಖವಾಗಿವೆ. ಆದರೂ, ಕುಂಬಾರರ ಮನೆಯಿಂದಲೇ ಮಣ್ಣೆತ್ತುಗಳನ್ನು ತೆಗೆದುಕೊಂಡು ಹೋಗಿ ಪೂಜಿಸುವ ಜನರಿದ್ದಾರೆ. ಇದರಿಂದ ಕೆಲ ಕುಟುಂಬಗಳು ಅನಿವಾರ್ಯವಾಗಿ ಮಣ್ಣೆತ್ತುಗಳನ್ನು ತಯಾರಿಸುವ ಕೆಲಸವನ್ನು ಹಬ್ಬದಲ್ಲಿ ಮಾಡುತ್ತಿವೆ.

ಆಕರ್ಷಣೆ ಬಯಸುವ ಜನರು ಅನ್ಯ ರಾಜ್ಯ, ಕೊಪ್ಪಳದಲ್ಲಿ ತಯಾರಿಸಿದ ಪಿಒಪಿ ಎತ್ತುಗಳ ಮೊರೆ ಹೋಗಿದ್ದಾರೆ. ಇಲ್ಲಿನ ಮಾರುಕಟ್ಟೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಕಂಡು ಬಂದ ಬಣ್ಣ ಬಣ್ಣದ ಎತ್ತುಗಳು ಸಾಮಾನ್ಯವಾಗಿಯೇ ಕಾಣಿಸತೊಡಗಿದ್ದು, ಇವುಗಳನ್ನು ಮಾರಾಟಕ್ಕೆಂದು ಮಹಾರಾಷ್ಟ್ರದ ಸೊಲ್ಲಾಪುರದಿಂದ ತರಿಸಲಾಗಿದೆ.

ಇವುಗಳಿಂದಾಗಿ ಪರಿಸರ ಸ್ನೇಹಿ ಮಣ್ಣೆತ್ತುಗಳ ಸಂಖ್ಯೆ ಇಳಿಮುಖವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ೫೦ ರೂ.ನಿಂದ ೪೦೦ ರೂ ಬೆಲೆಯ ಪಿಒಪಿ, ಮಣ್ಣಿನ ಎತ್ತುಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿವೆ.

Leave a Reply

Your email address will not be published. Required fields are marked *

error: Content is protected !!