ಪಿಡಿಐಟಿ ಜೊತೆ ಅಟ್ಲಾಂಟಿಸ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಒಪ್ಪಂದ
ಕರುನಾಡ ಬೆಳಗು ಸುದ್ದಿ
ವಿಜಯನಗರ, 19- ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಮತ್ತು ಯುನೈಟೆಡ್ ಸ್ಟೇಟ್ಸ್ ನ ಅಟ್ಲಾಂಟಿಸ್ ವಿಶ್ವವಿದ್ಯಾಲಯ ಅವರ ಸಹಯೋಗದಲ್ಲಿ ಪರಸ್ಪರ ಎರಡೂ ಸಂಸ್ಥೆಗಳ ನಡುವೆ “ಐ.ಟಿ.ಟ್ಯೂಟರ್ ಪ್ರೊ” ಎಂಬ ಒಡಂಬಡಿಕೆಗೆ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಅಲ್ಲಂ ಗುರುಬಸವರಾಜ್ ಮತ್ತು ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್ ಅವರ ನೇತೃತ್ವದಲ್ಲಿ ಸಹಿ ಹಾಕಲಾಯಿತು.
ಯು.ಎಸ್.ನ ಈ ಅಟ್ಲಾಂಟಿಸ್ ವಿಶ್ವವಿದ್ಯಾಲಯವು ಫ್ಲೊರಿಡಾ ರಾಜ್ಯದ ಮಿಯಾಮಿ ಎಂಬ ನಗರದಲ್ಲಿದ್ದು ಈ ಒಡಂಬಡಿಕೆಯ ಅಡಿಯಲ್ಲಿ, ಸಂಶೋಧನೆ ಮತ್ತು ಉಪನ್ಯಾಸ ಚಟುವಟಿಕೆಗಳಿಗಾಗಿ ಅಧ್ಯಾಪಕರ ವಿನಿಮಯ ಕಾರ್ಯಕ್ರಮಕ್ಕಾಗಿ ’ಪಿ.ಡಿ.ಐ.ಟಿ ಹೊಸಪೇಟೆ ಮತ್ತು ಯು.ಎಸ್.ನ ಅಟ್ಲಾಂಟಿಸ್ ವಿಶ್ವವಿದ್ಯಾಲಯದಿಂದ ಅಧ್ಯಾಪಕರನ್ನು ಆಹ್ವಾನಿಸಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ನಮ್ಮ ಕನ್ನಡಿಗರೇ ಆದ ಯು.ಎಸ್.ನ ಅಟ್ಲಾಂಟಿಸ್ ವಿಶ್ವವಿದ್ಯಾಲಯದ ಎಂ.ಡಿ. ಆದ ಕೈಲಾಸ್ ಚಿಂತಾಮಣಿ ಎರಡೂ ದೇಶಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರದ ಪರಸ್ಪರ ಪ್ರಯೋಜನವನ್ನು ಗುರುತಿಸುವ ಹೊಸ ಅಧ್ಯಾಯಕ್ಕೆ ನಾಂದಿಯಾಗಿದೆ ಈ ಒಡಂಬಡಿಕೆ ಪ್ರವೇಶಿಸಲು ನಾವು ಸಂತೋಷಪಡುತ್ತೇವೆ ಎಂದರು.
ಪರಸ್ಪರ ಪ್ರಯೋಜನಕಾರಿ : ಭಾರತ ಮತ್ತು ಯು.ಎಸ್ ಎರಡೂ ವೈಜ್ಞಾನಿಕ ಮತ್ತು ಸಂಶೋಧನಾ ಪ್ರತಿಭೆಗಳ ಶಕ್ತಿ ಕೇಂದ್ರಗಳಾಗಿವೆ. ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಈ ಒಪ್ಪಂದವು ಅಧ್ಯಾಪಕರ ಅರ್ಥಪೂರ್ಣ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದೆ, ಇದು ಪರಸ್ಪರ ಪ್ರಯೋಜನಕಾರಿಯಾಗಿದೆ ಎಂದು ಪಿ.ಡಿ.ಐ.ಟಿ ಕಾಲೇಜಿನ ಡೀನ್ ಡಾ. ಅರುಣ್ ಮುಧೋಳ ವಿಶ್ಲೇಶಿಸಿದರು. ವಿಶೇಷವಾಗಿ ಪಿ.ಡಿ.ಐ.ಟಿ ವಿದ್ಯಾರ್ಥಿಗಳಿಗೆಂದೆ ಈ ಯೋಜನೆಯಲ್ಲಿ ವಿದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಲು ಇಚ್ಛಿಸುವವವರಿಗೆ ಜಿ.ಆರ್.ಇ, ಟೊಫೆಲ್ ಮುಂತಾದ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನದ ಅವಕಾಶವನ್ನು ಯು.ಎಸ್.ನ ಅಟ್ಲಾಂಟಿಸ್ ವಿಶ್ವವಿದ್ಯಾಲಯವು ಕಲ್ಪಿಸುತ್ತದೆ ಎಂದು ಹೇಳಿದರು.
ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಇದರ ಮೂಲಕ ಹಲವಾರು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಜೊತೆಗೆ ಸಂಶೋಧನೆ, ವಿಜ್ಞಾನ ಮತ್ತು ನಾವೀನ್ಯತೆಗಳನ್ನು ತಿಳಿಸುವ ವೇದಿಕೆಯಾಗಿದೆ. ಇದರ ಅಡಿಯಲ್ಲಿ ಆನ್ಲೈನ್ ಕಲಿಕೆಗೂ ಅವಕಾಶವಿದೆ, ಕೈಗಾರಿಕೆ ಉದ್ಯಮಗಳಲ್ಲಿ ಅವಶ್ಯಕವಿರುವ ನವೀನ ತಂತ್ರಜ್ಞಾನ ಹಾಗೂ ಕೌಶಲ್ಯಗಳ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ ಎಂದು ಪಿ.ಡಿ.ಐ.ಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಕರಿಬಸವರಾಜ್ ಬಾದಾಮಿ ಹೇಳಿದರು.
ಪಿಡಿಐಟಿ ಪ್ರಾಂಶುಪಾಲರಾದ ಡಾ.ಯು.ಎಂ.ರೋಹಿತ್ ಮಾತನಾಡಿ ಬಳ್ಳಾರಿಯ ವಿ.ವಿ.ಸಂಘದ ಇಂಜಿನಿಯರಿಂಗ್ ಕಾಲೇಜಾದ ಆರ್.ವೈ.ಎಂ.ಇ.ಸಿಗೂ ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಪ್ರೊ.ಪಾರ್ವತಿ ಕಡ್ಲಿ ಮತ್ತು ವಿವಿಧ ತಾಂತ್ರಿಕ ವಿಭಾಗಗಳ ಮುಖ್ಯಸ್ಥರು, ಉಪಸ್ಥಿತರಿದ್ದರು.
