
ಬರಹಗಾರ ಸಮಾಜಕ್ಕೆ ಸದಾ ಮುಖಾಮುಖಿಯಾಗಬೇಕು : ಡಾ.ವಸುಂಧರಾ ಭೂಪತಿ
ಕರುನಾಡ ಬೆಲಗು ಸುದ್ದಿ
ಗಂಗಾವತಿ,27- ಸಾಹಿತ್ಯ ಕೃಷಿ ಅಥವಾ ಬರವಣಿಗೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿ ಸದಾ ಸಮಾಜಕ್ಕೆ ಮುಖಾಮುಖಿಯಾಗಬೇಕು. ಪ್ರಚಲಿತಗಳನ್ನು ದಾಖಲಿಸುವ ಮೂಲಕ ಕಾಲದೊಂದಿಗಿನ ವಿಚಾರಗಳನ್ನು ಜನರಿಗೆ ಮನ ಮುಟ್ಟುವ ರೀತಿಯಲ್ಲಿ ಕಟ್ಟಿಕೊಡಬೇಕು ಎಂದು ಹಿರಿಯ ಮಹಿಳಾ ಸಾಹಿತಿ ಡಾ. ಡಾ.ವಸುಂಧರಾ ಭೂಪತಿ ಹೇಳಿದರು.
ನಗರದ ಸಕರ್ಾರಿ ಪ್ರಥಮ ದರ್ಜೆ ಕಾಲೇಜು, ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸ್ಮಾರಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವರಾಜ ಕಟ್ಟೀಮನಿ ದೃಷ್ಟಿಯಲ್ಲಿ ಕಥನ ಸಾಹಿತ್ಯದಲ್ಲಿ ಸಾಮಾಜಿಕ ವಾಸ್ತವ’ ಎಂಬ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಬರಹಗಾರನಿಗೆ ಸಾಮಾಜಿಕ ಬದ್ಧತೆ ಮುಖ್ಯ. ತನ್ನ ಕಾಲದೊಂದಿಗೆ ಬರಹಗಾರ ನಿರಂತರ ಮುಖಾಮುಖಿಯಾಗಬೇಕು. ಬಸವರಾಜ ಕಟ್ಟಿಮನಿ ಯಾವುದೇ ಕಥೆ ,ಕಾದಂಬರಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಕುರಿತೇ ಬರೆದಿದ್ದಾರೆ. ಸ್ವಾತಂತ್ರ್ಯಾನಂತರ ಭಾರತದ ಸಾಮಾಜಿಕ ಬದುಕನ್ನು ಯಥಾವತ್ತಾಗಿ ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ.
ಅಸಮಾನತೆ, ಭ್ರಷ್ಟತೆ, ಬಡವರ, ದುರ್ಬಲರ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿದ್ದಾರೆ. ಅವರ ಕೃತಿಗಳು ಎಲ್ಲ ಕಾಲಕ್ಕೂ ಪ್ರಸ್ತುತತೆಯನ್ನು ಹೊಂದಿವೆ. ನಿಷ್ಠುರತೆ, ಸಾಮಾಜಿಕ ಬದ್ಧತೆ, ವ್ಯವಸ್ಥೆಯ ಕುರಿತು ಆಕ್ರೋಶ ಅವರ ಕೃತಿಗಳಲ್ಲಿ ತೀವ್ರವಾಗಿ ಅಭಿವ್ಯಕ್ತಿಗೊಂಡಿವೆ ಎಂದರು.
ಆಶಯ ಭಾಷಣ ಮಾಡಿದ ಹಿರಿಯ ಹೋರಾಟಗಾರ ಡಾ.ಸಿದ್ದನಗೌಡ ಮಾತನಾಡಿ, ಸಾಮಾಜಿಕ ಮೌಢ್ಯತೆ, ಕಂದಾಚಾರ, ಭ್ರಷ್ಟತೆ, ಶೋಷಣೆಯ ಕುರಿತು ಬಸವರಾಜ ಕಟ್ಟೀಮನಿ ತಮ್ಮ ಕೃತಿಗಳ ಮೂಲಕ ಪ್ರತಿರೋಧಿಸಿದ್ದಾರೆ. ದಿಟ್ಟತನದ ಬರವಣಿಗೆಯ ಮೂಲಕ ಸಾಮಾಜಿಕ ಜಾಗೃತಿಯನ್ನುಂಟು ಮಾಡಿದ್ದಾರೆ ಎಂದರು.