ಕೊಪ್ಪಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಆರೋಗ್ಯ ಅರಿವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ,18- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೊಪ್ಪಳ ನಗರದ ಕಲ್ಯಾಣ ನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಶುಕ್ರವಾರ ಆರೋಗ್ಯ ಅರಿವು ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಬಾಲ ಸ್ವಸ್ಥ ಕಾರ್ಯಕ್ರಮ ದಡಿಯಲ್ಲಿ ಹದಿ ಹರೆಯದವರ ಆರೋಗ್ಯದಲ್ಲಿ ನ್ಯೂನತೆ ಕಂಡು ಬಂದರೆ ಆರ್.ಬಿ.ಎಸ್.ಕೆ ತಂಡ ತಪಾಷಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.
ಹದಿ ಹರೆಯದವರು ಈ ದೇಶದ ಸಂಪತ್ತು ಅವರ ಆರೋಗ್ಯ ಕಾಪಾಡುವುದು ಇಲಾಖೆಗಳ ಮತ್ತು ಪಾಲಕರ ಕರ್ತವ್ಯವಾಗಿದೆ. ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ನೇಹ ಕ್ಲಿನಿಕ ವಿಭಾಗದಲ್ಲಿ ಹದಿ ಹರೆಯದವರ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ ಅವರು, ಸಾಂಕ್ರಾಮಿಕ ರೋಗಗಳ ಬಗ್ಗೆ ವಿವರವಾಗಿ ಮಾತನಾಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಪರಶುರಾಮ್ ಅವರು ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನೆ ಕಾರ್ಯಕ್ರಮ ಕುರಿತು, ಶ್ರೀನಿವಾಸ್ ಅವರು ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ ಕುರಿತು ವಿವರವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಸತಿ ನಿಲಯ ಮೇಲ್ವಿಚಾರಕರಾದ ಶಿವಪ್ಪ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
