IMG_20250304_130656

ಕೊಪ್ಪಳ ಸರ್ವಪಕ್ಷ ನಿಯೋಗಕ್ಕೆ ಸಿಎಂ ಸ್ಪಂದನೆ
   
ಬಿಎಸ್ ಪಿ ಎಲ್ ಕಾರ್ಖಾನೆ  ಸ್ಥಳಾಂತರ ಕ್ರಮಕ್ಕೆ  ಸಿ.ಎಂ. ಭರವಸೆ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 04 – ಬಲ್ಡೋಟಾ ಕಂಪನಿಯು 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇಂಟಿಗ್ರೇಟೆಡ್‌ ಉಕ್ಕಿನ ಕಾರ್ಖಾನೆಯನ್ನು ಜಿಲ್ಲಾ ಕೇಂದ್ರದ ಸಮೀಪದಲ್ಲಿಯೇ ಸ್ಥಾಪನೆ ಮಾಡಲು ಮುಂದಾಗಿದ್ದಕ್ಕೆ ಜನರ ವಿರೋಧ ವ್ಯಕ್ತವಾಗಿದ್ದರಿಂದ ಕಾರ್ಖಾನೆಯವರು ಮಾಡುತ್ತಿರುವ ಸಿದ್ದತಾ ಕಾರ್ಯಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರಿಗೆ ಸೂಚಿಸಿದ್ದಾರೆ.
ಮಂಗಳವಾರ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ನಿಯೋಗದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ, ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಶರಣಗೌಡ ಬಯ್ಯಾಪುರ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಮುಖಂಡರಾದ ವೀರೇಶ ಮಹಾಂತಯ್ಯನಮಠ, ಸಂತೋಷ ದೇಶಪಾಂಡೆ, ಶರಣಪ್ಪ ಸಜ್ಜನ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಕೆ. ಶರಣಪ್ಪ ಕರಿಯಣ್ಣ ಸಂಗಟಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ನಿಯೋಗದಿಂದ ಕಾರ್ಖಾನೆ ವಿಸ್ತರಣೆ ಮಾಡಿದರೆ ಜಿಲ್ಲಾಕೇಂದ್ರಕ್ಕೆ ವಿಪರೀತ ದೂಳು ಬರುತ್ತದೆ. ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಮನವರಿಕೆ ಮಾಡಿಕೊಡಲಾಯಿತು .
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಈ ಕುರಿತು ತ್ವರಿತ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.

ಜನರ ಭಾರಿ ವಿರೋದವಿದೆ ಕಾರ್ಖಾನೆ ಆರಂಭಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ‌ ಅನುಮತಿ ಕೊಟ್ಟಿಲ್ಲ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ‌ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಗಮನಿಸಿದ್ದೇನೆ.
ಈ ಕುರಿತು ‌ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಸಭೆ ನಡೆಸುವೆ ಎಂದು ಸಿ.ಎಂ. ಹೇಳಿದರು. ಕಾರ್ಖಾನೆ ಆರಂಭಕ್ಕೆ ನಡೆಯುತ್ತಿರುವ ಕೆಲಸ ಪರಿಶೀಲಿಸಿ ವರದಿ ನೀಡುವಂತೆ ಸಿ.ಎಂ. ಹೇಳಿದ್ದಾರೆ ಎಂದು ಪ್ರಮುಖರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!