
ಮಕ್ಕಳ ಜೀವ,ಭಾವಗಳನ್ನು ಅರಳಿಸುವ ಬೇಸಿಗೆ ಶಿಬಿರಗಳು : ವೀಣಾ ಪಾಟೀಲ್
ಕರುನಾಡ ಬೆಳಗು ಸುದ್ದಿ
ಶಾಲೆಯ ಸುಧೀರ್ಘ ಮತ್ತು ಏಕತಾನತೆಯ ಕಲಿಕೆಯ ನಂತರದ ಬೇಸಿಗೆ ರಜೆಗಳು ಮಕ್ಕಳ ಪಾಲಿಗೆ ಚೇತೋಹಾರಿಯಾಗಿರುತ್ತವೆ. ಹಿಂದೆಲ್ಲಾ ಅವಿಭಕ್ತ ಕುಟುಂಬಗಳು ಇದ್ದು ಮಕ್ಕಳು ರಜೆ ಬಿಡುತ್ತಿದ್ದಂತೆಯೇ ಸಂಬಂಧಿಗಳ ಮನೆಗೆ ಹೋಗುತ್ತಿದ್ದರು. ಆದರೆ ಇಂದು ಬಹಳವೆಂದರೆ 2 ರಿಂದ 3 ದಿನಗಳವರೆಗೆ ಮಾತ್ರ ಸಂಬಂಧಿಗಳ ಮನೆಯಲ್ಲಿ ತಂಗಬಹುದು. ಕನಿಷ್ಠ ಒಂದು ವಾರ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು…. ಹಾಗಾದರೆ ಉಳಿದ ದಿನಗಳಲ್ಲಿ ಏನು ಮಾಡಬಹುದು??
ಮಕ್ಕಳು ಮನೆಯಲ್ಲಿಯೇ ಇದ್ದರೆ …. ಆಟವಾಡುತ್ತಾ ಕಾಲ ಕಳೆಯಬಹುದು. ಆಟ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣ ನಿಜ. ಬೆಳಗಿನ ಜಾವ ಇಲ್ಲವೇ ಸಂಜೆಯ ಸಮಯ ಆಟ ಆಡಲು ಪ್ರಶಸ್ತವಾದರೂ ಬಿರು ಬೇಸಿಗೆಯ ಈ ದಿನಗಳಲ್ಲಿ ಮಕ್ಕಳು ಹೊರಾಂಗಣ ಕ್ರೀಡೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲು ಪಾಲಕರು ಬಿಡುವುದಿಲ್ಲ. ಅತಿ ಬಿಸಿಲಿನಿಂದಾಗುವ ಸುಸ್ತು, ಆಯಾಸ, ಬಳಲಿಕೆ, ತಲೆನೋವು ಮತ್ತು ಡಿಹೈಡ್ರೇಶನ್ ನಿಂದ ಮಕ್ಕಳು ನರಳುತ್ತಾರೆ. ಅತಿಯಾದ ಬಿಸಿಲು ಸನ್ ಸ್ಟ್ರೋಕ್ ಗೆ ಕೂಡ ಕಾರಣವಾಗುತ್ತದೆ. ಇನ್ನು ಮನೆಯ ಒಳಾಂಗಣ ಕ್ರೀಡೆಗಳಲ್ಲಿ ತೊಡಗಿಕೊಳ್ಳಲಿ ಎನ್ನುವುದಾದರೆ ಅದಕ್ಕೆ ಪೂರಕ ವಾತಾವರಣ ಮನೆಗಳಲ್ಲಿ ಇಲ್ಲ. ವಿಭಕ್ತ ಕುಟುಂಬದ ಒಂದೋ ಎರಡೋ ಮಕ್ಕಳಿರುವ ಮನೆಗಳಲ್ಲಿ ಪಾಲಕರು ಸದಾ ತಮ್ಮ ಕಾರ್ಯ ಚಟುವಟಿಕೆಗಳತ್ತ ಲಕ್ಷವಿಡಲಿ ಎಂಬ ಅಟೆನ್ಶನ್ ಸೀಕಿಂಗ್ ಸ್ವಭಾವದ ಮಕ್ಕಳ ಕಾರಣದಿಂದ ಪಾಲಕರು ಬೇಸತ್ತು ಬೇಸಿಗೆ ಶಿಬಿರಗಳತ್ತ ಮುಖ ಮಾಡುತ್ತಾರೆ.
ಇತ್ತೀಚೆಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ. ಈ ಬೇಸಿಗೆ ಶಿಬಿರಗಳಲ್ಲಿ ಪಠ್ಯೇತರ ಚಟುವಟಿಕೆಗಳಾದ ಹಾಡು, ನೃತ್ಯ, ನಾಟಕ, ಪೇಪರ್ ಕ್ರಾಫ್ಟ್ ಯೋಗ,ಮಂಡಲ ಆರ್ಟ್ ಮುಂತಾದ ಚಟುವಟಿಕೆಗಳನ್ನು ಮಾಡಿಸಿದರೆ ಇನ್ನು ಕೆಲವು ಸಂಸ್ಥೆಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗುವ ವೇದಗಣಿತ, ಅಬಾಕಸ್, ಸ್ಪೀಡ್ ಮ್ಯಾಥಮ್ಯಾಟಿಕ್ಸ್, ರೋಬೋಟಿಕ್ಸ್ ನಂತಹ ವಿಷಯಗಳನ್ನು ಕಲಿಸುತ್ತಾರೆ. ಇನ್ನೂ ಹಲವೆಡೆ ಕಂಪ್ಯೂಟರ್ ಬೇಸಿಕ್ ತರಗತಿಗಳನ್ನು ನಡೆಸಿದರೆ ಮತ್ತೆ ಕೆಲವೆಡೆ ಸಂಪೂರ್ಣ ರಂಗ ಚಟುವಟಿಕೆಗಳನ್ನು ನಡೆಸುತ್ತಾರೆ. ಮಹಾನಗರಗಳಲ್ಲಿ ಈಜು ತರಬೇತಿ, ವಿವಿಧ ಬಗೆಯ ಆಟಗಳ ತರಬೇತಿಗಳು ಕೂಡ ಒಳಾಂಗಣ ಕ್ರೀಡಾಂಗಣಗಳಲ್ಲಿ ನಡೆಯುತ್ತವೆ.
ಇನ್ನೂ ಹಲವೆಡೆ ಮಕ್ಕಳ ಶಾಲಾ ಪಠ್ಯಕ್ರಮದ ತರಬೇತಿಗಳನ್ನು ನೀಡಲಾಗುತ್ತದೆ. ವರ್ಷವಿಡೀ ಕಲಿಯಬೇಕಾದ ಪಠ್ಯಕ್ರಮವನ್ನು ಕೇವಲ ಎರಡು ತಿಂಗಳಿನಲ್ಲಿ ಕಲಿಸುವ ಕುರಿತು ಶಿಕ್ಷಣ ತಜ್ಞರ ಮತ್ತು ಬುದ್ಧಿಜೀವಿಗಳ ವಿರೋಧ ಇದ್ದರು ಹೆಚ್ಚಾಗಿ ಪಾಲಕರು ಈ ಶಿಬಿರಗಳಿಗೆ ಮಕ್ಕಳನ್ನು ದಾಖಲು ಮಾಡುತ್ತಾರೆ. ಎಷ್ಟೋ ಬಾರಿ ಮಕ್ಕಳಿಗೆ ಒತ್ತಕ್ಷರಗಳು, ಮಗ್ಗಿಗಳು, ಪದಗಳನ್ನು ಜೋಡಿಸಿ ಓದುವುದು, ಬರೆಯುವುದು ಮುಂತಾದ ಮೂಲಭೂತ ಕಲಿಕೆಯ ಅಂಶಗಳ ಅರಿವು ಮೂಡಿಸುವ ಕೆಲಸವನ್ನು ಈ ಬೇಸಿಗೆ ಶಿಬಿರಗಳು ಮಾಡುತ್ತವೆ. ಇದು ಅವರಿಗೆ ಅನಿವಾರ್ಯವೂ ಕೂಡ. ನೀರಿಳಿಯದ ಗಂಟಲಿನಲ್ಲಿ ಕಡುಬನ್ನು ತುರುಕಲು ಸಾಧ್ಯವಿಲ್ಲ ಅಲ್ಲವೇ!! ಹಾಗೆಯೇ ಮೂಲಭೂತ ಕಲಿಕೆಯ ಜ್ಞಾನ ಹೊಂದಿರದ ಮಕ್ಕಳಿಗೆ ಶಾಲಾ ಪಠ್ಯಕ್ರಮ ಕಲಿಸುವುದು ಕಷ್ಟದಾಯಕ.
ಆದರೆ ಮಕ್ಕಳ ಹಿತದೃಷ್ಟಿಯಿಂದ ಸಂಪೂರ್ಣ ಎರಡು ತಿಂಗಳ ಬೇಸಿಗೆ ಶಿಬಿರವನ್ನು ನಡೆಸಬಾರದು. ಮಕ್ಕಳು ಕೆಲ ದಿನಗಳ ಮಟ್ಟಿಗಾದರೂ ಸಂಬಂಧಿಗಳ ಮನೆಗೆ ಭೇಟಿ ಕೊಡಬೇಕು ಮತ್ತು ಪಾಲಕರೊಂದಿಗೆ ಪ್ರವಾಸ ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಮಗು ಸಮಾಜ ಜೀವಿಯಾಗಿ ಬೆಳೆಯುತ್ತದಲ್ಲದೆ ಪ್ರವಾಸ ಮಗುವಿನ ಬೌದ್ಧಿಕ ವಿಕಾಸಕ್ಕೆ ಕಾರಣವಾಗುತ್ತದೆ.
ಬೇಸಿಗೆ ಶಿಬಿರದ ತರಬೇತಿಯಿಂದ ಮಕ್ಕಳಿಗಾಗುವ ಲಾಭಗಳು ಹೀಗಿವೆ.
1. ಮಕ್ಕಳು ಮನೆಯಿಂದ ಹೊರಗೆ ಶಾಲೆಯಿಂದ ಹೊರತಾದ ಪರಿಸರದಲ್ಲಿ ವೈವಿಧ್ಯಮಯ ವಿಷಯಗಳನ್ನು ಕಲಿಯುತ್ತಾರೆ.
2. ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಯು ಮುಖ್ಯ ಎಂಬುದನ್ನು ಅರಿತು ಬುದ್ಧಿ ಭಾವಗಳ ಅರಳುವಿಕೆಗೆ ಸಹಕಾರಿಯಾಗುವ ಕಲೆಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ.
3. ಪ್ರದರ್ಶನ ಕಲೆಗಳಾದ ಹಾಡುಗಾರಿಕೆ, ನೃತ್ಯ, ನಾಟಕ, ಕುಸುರಿ ಕಲೆಯಂತಹ ವಿದ್ಯೆಗಳು ಮಕ್ಕಳಲ್ಲಿನ ಆಸಕ್ತಿಯನ್ನು ಹೆಚ್ಚಿಸುವುದು. ನವರಸಗಳ ಭಾವಾಭಿವ್ಯಕ್ತಿಯ ಮೂಲಕ ಮಕ್ಕಳು ಹೊರ ಹಾಕುತ್ತಾರೆ.
4.ಶಾಲೆಯ ಏಕತಾನತೆಯಿಂದ ಹೊರಬಂದು ಸಮಯದ ಪರಿಮಿತಿ ಇಲ್ಲದೆ ಗುಂಪು ಚಟುವಟಿಕೆಗಳಲ್ಲಿ ತೊಡಗುವುದು ಮಕ್ಕಳಲ್ಲಿ ಸಹಕಾರ ಮತ್ತು ಹೊಂದಾಣಿಕೆ ಮನೋಭಾವ ಬೆಳೆಸುತ್ತದೆ.
5. ಮನೆಯ ಒಳಗೆ ಟಿವಿ ನೋಡುತ್ತಾ ಮೊಬೈಲ್ ನಲ್ಲಿ ಆಟವಾಡುತ್ತಾ, ಕಾಲ ಹರಣ ಮಾಡುವ, ವಿಡಿಯೋ ಗೇಮ್ ನಲ್ಲಿ ಜಗಳವಾಡುವ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ, ಕಲಿಕೆಯ ಇನ್ನೊಂದು ಆಯಾಮವನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಮನೆಯಲ್ಲಿ ಇದ್ದು ಟಿವಿ ರಿಮೋಟ್ ಗಾಗಿ ಹೊಡೆದಾಡುವ, ವಿಡಿಯೋಗೇಮ್ ಆಡುತ್ತಾ ಹೊಡಿ, ಬಡಿ, ಕೊಲ್ಲು ಎಂದು ಕಿರುಚುತ್ತಾ ಮಾತು ಮಾತಿಗೆ ತಂದೆ ತಾಯಿಯ ಬಳಿ ಚಾಡಿ ಹೇಳಲು ಧಾವಿಸುವ ಮಕ್ಕಳನ್ನು ಸೂಕ್ತವೆನಿಸುವ ಬೇಸಿಗೆ ಶಿಬಿರಗಳಿಗೆ ದಾಖಲು ಮಾಡಿ ಮಕ್ಕಳ ಬಾಲ್ಯ ವಿಕಸಿತಗೊಳಿಸಿ ಮಕ್ಕಳ ಸರ್ವಾ0ಗೀಣ ಅಭಿವೃದ್ಧಿಗೆ ಬುನಾದಿ ಹಾಕಿ ಮತ್ತು ನಿಮ್ಮ ಮನಃಶಾಂತಿಯನ್ನು ಕಾಯ್ದುಕೊಳ್ಳಿ(ಅದೂ ಕೂಡಾ ಮುಖ್ಯ)