
ಮಳೆ ಬೆಳೆ ಸಂಪಾಯಿತಲೆ ಪರಾಕ್ : ಮೈಲಾರ
ಕಾರ್ಣಿಕೋತ್ಸವದಿಂದ ಭಕ್ತಗಣದಲ್ಲಿ ಸಂಭ್ರಮ
ಕರುನಾಡ ಬೆಳಗು ಸುದ್ದಿ
ವಿಜಯನಗರ,27- ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಡ ಪ್ರಸಿದ್ಧ ಸುಕ್ಷೇತ್ರ ಮೈಲಾರದ ಶ್ರೀಮೈಲಾರಲಿಂಗೇಶ್ವರ ಸ್ವಾಮಿ ದೇವರ ಕಾರ್ಣಿಕ ನುಡಿಯು `ಸಂಪಾಯಿತಲೆ ಪರಾಕ್’ ಎಂದಾಗಿದೆ.
ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನ ಬಳಿಯ ಡಂಕನಮರಡಿಯಲ್ಲಿ 18 ಅಡಿ ಎತ್ತರದ ಬಿಲ್ಲನ್ನು ಏರಿದ ಗೊರವಯ್ಯ ಅವರು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ `ಸಂಪಾಯಿತಲೆ ಪರಾಕ್’ ಎಂದು ದೈವವಾಣಿ ನುಡಿಯುತ್ತಿದ್ದಂತೆ ಭಕ್ತ ಗಣವು ಸಂಭ್ರಮಿಸಿತು.
ರಾಜ್ಯದಲ್ಲಿ ಈ ವರ್ಷ ಮಳೆ ಬೆಳೆಗಳು ಸಮೃದ್ಧಿಯಿಂದಾಗಿ ಜನರು ಸುಖ ನೆಮ್ಮದಿಯಿಂದ ಇರುತ್ತಾರೆ ಎಂದು ಭಕ್ತರು ಮೈಲಾರ ಲಿಂಗೇಶ್ವರ ಕಾರ್ಣಿಕವನ್ನು ವಿಶ್ಲೇಷಿಸಿದರು.
ಹಿಂದೂ ಧಾರ್ಮಿಕ ಸಂಸ್ಥೆಯು ಮತ್ತು ಧರ್ಮಾದಾಯ ದತ್ತಿ ಇಲಾಖೆಯಿಂದ ನಡೆದ ಈ ಕಾರ್ಣಿಕೋತ್ಸವದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜನರು ಹಾಗೂ ಅಂತಾರಾಜ್ಯ ಭಕ್ತರು ಸಹ ಎತ್ತಿನ ಬಂಡಿ, ಟ್ರಾಕ್ಟರ್ ಮೂಲಕ ಮೈಲಾರ ಕ್ಷೇತ್ರಕ್ಕೆ ಆಗಮಿಸಿದ್ದರು. ಕಣ್ಣು ಹಾಯಿಸಿದೆಲ್ಲೆಡೆ ಭಕ್ತರು ಕಾಣಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತರಾದ ಶ್ರೀಗುರು ವೆಂಕಪ್ಪಯ್ಯ ಒಡೆಯರ್, ಕಾಗಿನೆಲೆ ಪೂಜ್ಯರಾದ ನಿರಂಜನನAದ ಸ್ವಾಮಿಗಳು, ಚನ್ನಬಸವೇಶ್ವರ ಸ್ವಾಮಿಗಳು, ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ್, ಐಜಿಪಿ ಬಿ.ಎಸ್.ಲೋಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಆಯುಕ್ತರಾದ ಹೆಚ್.ಗಂಗಾಧರಪ್ಪ, ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ, ಜೇಸ್ಕಾಂನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹುಸೇನ್‌ಸಾಬ್ ಹಾಗೂ ತಾಲೂಕಿನ ಗಣ್ಯರು, ಸಾರ್ವಜನಿಕರು ಆಗಮಿಸಿದ್ದರು.
ಫೆ.27ರ ಕಾರ್ಯಕ್ರಮ: ಫೆ.27ರಂದು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯು ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವುದು. ಸಂಜೆ 4.30ಕ್ಕೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಗುರು ಪಾರಂಪರ್ಯ ಶ್ರೀ ಗುರುಗಳಿಂದ ಭಂಡಾರ ಆಶೀರ್ವಾದ ನಂತರ ಕಂಚಿವೀರರಿAದ ಪವಾಡ ಹಾಗೂ ಗೊರವಯ್ಯರವರಿಂದ ಸರಪಳಿ ಪವಾಡ ನಡೆಯಲಿದೆ.