
ಮಹಾತಾಯಿ ಹುಚ್ಚಮ್ಮ ಇವರಿಗೆ
ರಾಜ್ಯೋತ್ಸವ ಪ್ರಶಸ್ತಿ ನೀಡಲು ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 24- ತಾವು ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ , ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಹುಚ್ಚಮ್ಮನಿಗೆ ಮೊದಲ ಆದ್ಯತೆಯನ್ನು ನೀಡಬೇಕು ಎಂದು ಪ್ರಗತಿ ಪರ ಚಿಂತಕ .ಹೋರಾಟಗಾರ ಬಸವರಾಜ ಶೀಲವಂತರ ಹಾಗೂ ಸ್ನೇಹಿತರು ಒತ್ತಾಯಿಸಿದ್ದಾರೆ.
ಈ ಕುರಿತು ಸಚಿವರಿಗೆ ಮನವಿ ಸಲ್ಲಿಸಿರುವ ಅವರು ಯಾವ ಫಲಾಪೇಕ್ಷೆಯನ್ನು ಬಯಸದೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳಬಹುದಾದ ತನ್ನ ೨ ಎಕರೆ ಜಮೀನನ್ನು ಶಾಲಾ ಮಕ್ಕಳ ಒಳತಿಗಾಗಿ ದಾನವನ್ನು ಮಾಡಿದ ತ್ಯಾಗಮಯಿ.
ಸುಮಾರು ೨೧ ವರ್ಷಗಳ ಕಾಲ ತಾನು ಜಮೀನು ದಾನ ಮಾಡಿದ ಸ.ಹಿ.ಪ್ರಾ.ಶಾಲೆಯಲ್ಲಿ ಬಿಸಿಯೂಟ ನೌಕರಳಾಗಿ ಕೆಲಸ ಮಾಡಿ, ಸರಕಾರವು ನೀಡುವ ಬಿಡಿಗಾಸಿನಲ್ಲಿ ಜೀವನ ನಡೆಸಿದ್ದಾಳೆ.
ಸುಮಾರು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ಈ ಮಹಾ ತಾಯಿಗೆ ಮಕ್ಕಳಾಗಲಿಲ್ಲ. ತನಗೆ ಮಕ್ಕಳಿಲ್ಲದಿದ್ದರೇನಂತೆ ಶಾಲೆಯಲ್ಲಿನ ಬಡಮಕ್ಕಳನ್ನು ತನ್ನ ಮಕ್ಕಳಂತೆ ಅಕ್ಕರೆಯಿಂದ ಬೆಳಸಿದಾಕೆ. ಈಗ ಕೆಲಸದಿಂದ ನಿವೃತ್ತಿಯಾಗಿರುವ ಹುಚ್ಚಮ್ಮನಿಗೆ , ಆಕೆ ಸಾಕಿದ ಮೊಮ್ಮಗಳದ್ದೆ ಆಸರೆ.
ಹುಚ್ಚಮ್ಮನಿಗೆ ಇರಲಿಕ್ಕೆ ಒಂದು ತಗಡು ಹೊದಿಸಿದ ಮನೆ ಬಿಟ್ಟರೆ ಎನೂ ಇಲ್ಲ. ಬದುಕು ದುಸ್ತರ. ಇವತ್ತು ಇರುವುದೆಲ್ಲವು ನನಗೆ ಇರಲಿ ಅನ್ನುವಂಥ ಜನರ ಮಧ್ಯ , ಇರುವುದೆಲ್ಲವ( ಜಮೀನು ) ಕೊಟ್ಟು/ಶಾಲೆಗೆ ದಾನವನ್ನು ಮಾಡಿ ಬರಿಗೈಯಿ ಆಗುವವರು ತೀರಾ ಅಪರೂಪ. ಇಂದು ಕೂಡ ಆ ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಬಿಡುವಾದಾಗಲೆಲ್ಲ ಶಾಲೆಗೆ ಹೋಗಿ ಬಿಸಿಯೂಟದ ಕೆಲಸಕ್ಕೆ ಕೈಜೋಡಿಸುತ್ತಾಳೆ ಅವರಿಗೆ ಸರ್ಕಾರ ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.