ಜಿಲ್ಲಾ ಚುನಾವಣಾ ವಿಭಾಗದಲ್ಲಿ ವಿಡಿಯೋ ಸಂವಾದ (1)

ಮಾಧ್ಯಮ ಪ್ರಮಾಣೀಕರಣ, ಮೇಲ್ವಿಚಾರಣಾ ಸಮಿತಿ ಮಾರ್ಗಸೂಚಿಗಳನ್ವಯ ಕಾರ್ಯನಿರ್ವಹಿಸಲಿ : ವೆಂಕಟೇಶ್‌ಕುಮಾರ್ ಆರ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ,23- ಮುಂಬರುವ ಲೋಕಸಭಾ ಚುನಾವಣೆ-2024 ರ ಅಂಗವಾಗಿ ಕರ್ನಾಟಕ ಚುನಾವಣಾ ಆಯೋಗದಿಂದ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣಾ ಸಮಿತಿಯ ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ಜಿಲ್ಲಾ ಚುನಾವಣಾ ವಿಭಾಗದಲ್ಲಿ ವಿಡಿಯೋ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.

ವಿಡಿಯೋ ಸಂವಾದದಲ್ಲಿ ಮಾತನಾಡಿದ ಕರ್ನಾಟಕ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್‌ಕಮಾರ್ ಆರ್. ಅವರು, ಚುನಾವಣೆಗಳಲ್ಲಿ ನೀತಿ ಸಂಹಿತೆ ಜಾರಿ ದಿನಾಂಕದಿAದ ಮುಕ್ತಾಯದ ದಿನಾಂಕದವರೆಗೆ ಚುನಾವಣಾ ನಿಯೋಜಿತ ಸಮಿತಿ, ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಅದರನ್ವಯ ಕಾರ್ಯನಿರ್ವಹಿಸಬೇಕು. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ತಮ್ಮ ಪ್ರಚಾರದ ಮಾರ್ಗವಾಗಿ ದಿನಪತ್ರಿಕೆಗಳು, ಸುದ್ದಿವಾಹಿನಿಗಳು, ರೇಡಿಯೋ, ಎಫ್.ಎಂಗಳು, ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿರುತ್ತವೆ.

ಆದ್ದರಿಂದ ಇವುಗಳ ಮೇಲೆ ನಿಗಾ ಇಡಲು ಚುನಾವಣಾ ಆಯೋಗದಿಂದ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ವಾರ್ತಾಧಿಕಾರಿಗಳನ್ನು ಒಳಗೊಂಡು ಜಿಲ್ಲಾ ಚುನಾವಣಾಧಿಕಾರಿಗಳು ಸಮಿತಿಯನ್ನು ರಚಿಸಬೇಕು ಎಂದು ಅವರು ತಿಳಿಸಿದರು.

ಚುನಾವಣೆಗಾಗಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಪತ್ರಿಕೆಗಳು, ಸುದ್ದಿವಾಹಿನಿಗಳು ಮುಂತಾದ ಮಾಧ್ಯಮಗಳ ಮೂಲಕ ನೀಡುವ ಜಾಹೀರಾತುಗಳ ಮೇಲೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳ ಮೇಲೆ ಸಮಿತಿಯು ನಿಗಾ ವಹಿಸಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ, ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಸಂದರ್ಶನ, ಏಕ ವ್ಯಕ್ತಿ ಕೇಂದ್ರಿತ ಸುದ್ದಿಗಳ ಮೇಲೆ ನಿಗಾ ವಹಿಸಿ, ಪೇಯ್ಡ್ ಸುದ್ದಿಯ ಕುರಿತು ಎಚ್ಚರಿಕೆ ವಹಿಸಬೇಕು. ಪೇಯ್ಡ್ ಸುದ್ದಿ ಎಂದು ಸಮಿತಿಯು ನಿರ್ಧರಿಸಿದ ಮೇಲೆ ಆಯೋಗದ ಮಾರ್ಗಸೂಚಿಯನ್ವಯ ಮುಂದಿನ ಕ್ರಮ ಕೈಗೊಳ್ಳಬೇಕು. ಜಾಹೀರಾತಿ ವೆಚ್ಚದ ಮಾಹಿತಿಯನ್ನು ಆರ್‌ಒ, ಎಕ್ಷ್ಪೆಂಡಿಚರ್ ಅಧಿಕಾರಿಗೆ ಪ್ರತಿ ದಿನ ನೀಡಬೇಕು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು, ಸುದ್ದಿಗಳನ್ನು ಗುರುತಿಸಿ ವರದಿ ಮಾಡಬೇಕು ಎಂದು ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣಾ ಸಮಿತಿಯ ಕಾರ್ಯಗಳು, ಜವಾಬ್ದಾರಿಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.

ವಿಡಿಯೋ ಸಂವಾದದಲ್ಲಿ ಚುನಾವಣಾ ತಹಶೀಲ್ದಾರ ರವಿ ವಸ್ತ್ರದ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಮಂಜುನಾಥ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಚುನಾವಣಾ ವಿಭಾಗದ ನಾಗರಾಜ, ಪ್ರಸನ್ನ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!