
ರಂಭಾಪುರಿ ಶ್ರೀಗಳ ಮಾತುಗಳಿಗೆ
ಜಾಗತಿಕ ಲಿಂಗಾಯತ ಮಹಾಸಭಾ ಖಂಡನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೫- ‘ವಚನದರ್ಶನ ಮಿಥ್ಯ ವರ್ಸ್ಸ್ ಸತ್ಯ’ ಕೃತಿಯ ಬಿಡುಗಡೆಯ ಸಮಾರಂಭವು ಅರ್ಥಗರ್ಭಿತವಾಗಿ ಯಶಸ್ವಿಯಾಗಿದ್ದನ್ನು ಸಹಿಸದೇ, ಅಸಹನೆಯಿಂದ ತಾಳಿಕೋಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಬಾಳೆಹೊನ್ನೂರು ರಂಭಾಪುರಿ ಶ್ರೀ ವೀರಸೋಮೇಶ್ವರ ಸ್ವಾಮೀಜಿಯವರ ಮಾತುಗಳು ಅವರ ಸಣ್ಣತನವನ್ನು ತೋರಿಸುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಂಭಾಪುರಿ ಶ್ರೀಗಳು “ಲಿಂಗಾಯತ ಒಂದು ಧರ್ಮವಲ್ಲ” ಎಂದು ಹೇಳಿದ್ದಲ್ಲದೇ ನಾಡಿನ ಬಹುದೊಡ್ಡ ವಿದ್ವಾಂಸರೂ, ಬಸವ ಸಾಕ್ಷಿಯಂತಿರುವ ತೊಂಭತ್ತ ನಾಲ್ಕು ವರ್ಷದ ಹಿರಿಯ ಚೇತನ ಡಾ. ಗೊ.ರು.ಚ. ಅವರನ್ನು “ವಯೋವೃದ್ಧ, ಅವನಿಗೆ ಧರ್ಮದ ಇತಿಹಾಸವೇ ಗೊತ್ತಿಲ್ಲ” ಎಂದು ಏಕವಚನದಲ್ಲಿ ಸಂಬೋಧಿಸಿದ್ದಾರೆ.
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಈ ಸ್ವಾಮೀಜಿಗಳು ಕನ್ನಡ ನಾಡಿಗೆ, ಶರಣ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಗೊ.ರು.ಚ. ರಂಥ ಹಿರಿಯರಿಗೆ ಅಪಚಾರ ಮಾಡಿದ್ದಾರೆ. ‘ಲಿಂಗಾಯತ – ಒಂದು ಸ್ವತಂತ್ರ ಧರ್ಮ’ ಮಾನ್ಯತೆ ಪಡೆಯುವಲ್ಲಿ ಧನಾತ್ಮಕವಾಗಿ ಸಾಗುತ್ತಿದ್ದು ಇದನ್ನು ಸಹಿಸದೇ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿರುವುದು ಸಮಾಜದ ಹಿತ-ದೃಷ್ಟಿಯಿಂದ ಒಳ್ಳೆಯದಲ್ಲ.
‘ವಚನ ದರ್ಶನ ಮಿಥ್ಯ ವರ್ಸಸ್ ಸತ್ಯ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಶಂಕರ ಬಿದರಿಯವರು ರೇಣುಕಾಚಾರ್ಯರ ಭಾವಚಿತ್ರದ ಪ್ರತಿಗಳನ್ನು ಮುದ್ರಿಸಿ ಹಂಚುತ್ತೇನೆ ಎಂದೂ ಹೇಳಿಯೇ ಇಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ರಂಭಾಪುರಿ ಶ್ರೀಗಳು ಕಪೋಲಕಲ್ಪಿತವಾಗಿ ಕಲ್ಪಿಸಿಕೊಂಡು ಮಾತನಾಡುತ್ತಿದ್ದಾರೆ. ಬಸವ ಜಯಂತಿಯ ದಿನವೇ ಎಲ್ಲ ಶರಣರ ಜಯಂತಿಯನ್ನೂ ಒಂದೇ ದಿನ ಮಾಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ ಅಷ್ಟೇ. ಗೊ.ರು.ಚ. ಅವರು ಮಾತನಾಡಿ “ಲಿಂಗಾಯತ ಪದವನ್ನು ಹೆಚ್ಚು ಹೆಚ್ಚು ಬಳಕೆ ಮಾಡಿದರೆ ‘ವೀರಶೈವ’ ಪದಬಳಕೆ ನಾಲ್ಕೆöÊದು ವರ್ಷಗಳಲ್ಲಿ ಕಡಿಮೆಯಾಗುತ್ತದೆ” ಎಂದು ಹೇಳಿದ್ದಾರೆ ಮತ್ತು ಈ ಮಾತು ನಿಜವೂ ಆಗಿದೆ.
ಆದರೆ ಸಮಾರಂಭವನ್ನು ಸರಿಯಾಗಿ ಗ್ರಹಿಸದೇ ರಂಭಾಪುರಿ ಶ್ರೀಗಳು ಪೂರ್ವಾಗ್ರಹಪೀಡಿತರಾಗಿ ತಪು ಸಂದೇಶಗಳನ್ನು ಕೊಡುತ್ತಿದ್ದಾರೆ. ಬಸವಣ್ಣನವರನ್ನು ಮನೆ-ಮನಗಳಿಗೆ ತಲುಪಿಸುವ ಮತ್ತು ಸಮಾಜವನ್ನು ಒಗ್ಗೂಡಿಸುವ ಕೆಲಸದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯು ಸಣ್ಣ ಅವಧಿಯಲ್ಲಿಯೇ ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ಗೊ.ರು.ಚ. ಮತ್ತಿತರ ಹಿರಿಯರ ಕುರಿತಾಗಿ ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯ ಕುರಿತು ಮಾತನಾಡುವಾಗ ಗೌರವದಿಂದ ಮಾತನಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ರಾಜ್ಯ ಕಾರ್ಯದರ್ಶಿಗಳಾದ ಗವಿಸಿದ್ಧಪ್ಪ ಕೊಪ್ಪಳ, ಕೊಪ್ಪಳ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ ಮತ್ತು ಎಲ್ಲ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.