
ಲೋಕಕಲ್ಯಾಣಾರ್ಥಕವಾಗಿ ಶ್ರೀರಾಮ ತಾರಕ್ ಜಪ ಸಂಕಲ್ಪಕ್ಕೆ ಅಭೂತಪೂರ್ವ ಬೆಂಬಲ
ಕರುನಾಡು ಬೆಳಗು ಸುದ್ದಿ
ಕೊಪ್ಪಳ: ಲೋಕ ಕಲ್ಯಾಣಾರ್ಥವಾಗಿ ಇಲ್ಲಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ವಿಜಯದಶಮಿ ದಿನವಾದ ಸೋಮವಾರ ಜಿಲ್ಲೆಯಾದ್ಯಂತ ಶ್ರೀರಾಮ ತಾರಕ ಮಂತ್ರ ಮತ್ತು ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜಪದ ಸಂಕಲ್ಪ ಅಭಿಯಾನ ಆರಂಭಗೊಂಡಿತು
ಇಲ್ಲಿನ ಕಲ್ಯಾಣ ನಗರ, ಪ್ರಶಾಂತ ಕಾಲೊನಿಯ ವಿಠ್ಠಲ ಕೃಷ್ಣ ದೇವಸ್ಥಾನ, ಭಾಗ್ಯನಗರ ಶಾಸ್ತ್ರಿ ಕಾಲೊನಿ, ಪದಕಿ ಕಾಲೊನಿಯ ಸಿದ್ಧಿವಿನಾಯಕ ದೇವಸ್ಥಾನ, ಬಿಟಿ ಪಾಟೀಲ್ ನಗರ, ರಾಯರ ಮಠ, ಕುಷ್ಟಗಿಯ ವೆಂಕಟೇಶ್ವರ ದೇವಸ್ಥಾನ, ವಾರಕಾರ ಓಣಿ, ಪ್ರಗತಿ ನಗರದ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮಹಿಳಾ ಮಂಡಳಿಗಳು ಸೇರಿದಂತೆ ವಿವಿಧೆಡೆ ಜಪದ ಸಂಕಲ್ಪ ನಡೆಸಿದವು.
‘ಜಪ ನಿರಂತರವಾಗಿ ನಡೆಯುತ್ತಿರುತ್ತದೆ. 2024ರ ಜನವರಿಯಲ್ಲಿ ಉತ್ತರ ಪ್ರದೇಶದ ಆಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮನ ಮೂರ್ತಿ ಪುನರ್ ಪ್ರತಿಷ್ಠಾಪನೆ ನಡೆಯುವ ದಿನದಂದು ಜಿಲ್ಲೆಯಾದ್ಯಂತ ಶೋಭಾಯಾತ್ರೆ ಮತ್ತು ಜಪ ಸಮರ್ಪಣೆಗೆ ಯಜ್ಞ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಸಂಘಟಕರು ತಿಳಿಸಿದ್ದಾರೆ. ಆರಂಭದಲ್ಲಿ ಜಪ ಸಂಕಲ್ಪದ ಉದ್ದೇಶವನ್ನು ಸಮಾಜ ಬಾಂಧವರಿಗೆ ತಿಳಿಸಲಾಯಿತು.
ಮಹಾಸಭಾದ ಕಾರ್ಯಕಾರಿಣಿ ಸದಸ್ಯ ಎಚ್.ಬಿ. ದೇಶಪಾಂಡೆ, ಸಮಾಜದ ಮುಖಂಡರಾದ ಡಾ. ಕೆ.ಜಿ. ಕುಲಕರ್ಣಿ, ವೇಣುಗೋಪಾಲ ಆಚಾರ್ ಜಹಗೀರದಾರ, ಪ್ರಾಣೇಶ ಮಾದನೂರು, ವಸಂತ ಪೂಜಾರ, ಗುರುರಾಜ ಜೋಶಿ, ಅನಿಲ್ ಕುಮಾರ ಕುಲಕರ್ಣಿ ಮುರುಡಿ, ಲತಾ ಮುಧೋಳ್, ಮಹಾಸಭಾದ ಕಾರ್ಯಕಾರಿ ಸದಸ್ಯೆ ವೈಷ್ಣವಿ ಹುಲಿಗಿ, ಜಿಲ್ಲಾ ವಿಪ್ರ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮಧುರಾ ಕರ್ಣಂ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.