ವಿವಿಧ ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಕರುನಾಡ ಬೆಳಗು ಸುದ್ದಿ
ವಿಜಯನಗರ, 10- 2024ನೇ ಸಾಲಿನ ಮೊಹರಂ ಹಬ್ಬದ ಆಚರಣೆಯು ಜುಲೈ 8 ರಿಂದ ಜುಲೈ 17 ರವರೆಗೆ ವಿಜಯನಗರ ಜಿಲ್ಲೆಯಾದ್ಯಂತ ನಡೆಯಲಿದ್ದು, ಈ ಹಬ್ಬದ ಆಚರಣೆಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ಹಿಂದಿನ ಘಟನೆಗಳನ್ನು ಹಾಗೂ ಪ್ರಸ್ತುತ ಸನ್ನಿವೇಶಗಳನ್ನು ಆಧಾರಿಸಿ ಜಿಲ್ಲೆಯ ಹನಸಿ, ತಿಮ್ಮಲಾಪುರ, ಐಗಳಮಲ್ಲಾಪುರ ಮತ್ತು ಟಿ. ಕಲ್ಲಹಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕವಾಗಿ ಹಬ್ಬ ಆಚರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35 (ಎ)(ಬಿ)(ಡಿ)(ಇ) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕೂಡ್ಲಿಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಹನಸಿ, ಎಂ.ಎಂ .ಹಳ್ಳಿ ವ್ಯಾಪ್ತಿಯ ತಿಮ್ಮಲಾಪುರ, ಹೊಸಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಐಗಳಮಲ್ಲಾಪುರ ಮತ್ತು ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ಕಲ್ಲಹಳ್ಳಿಯಲ್ಲಿ ಗ್ರಾಮಗಳಲ್ಲಿ ಜುಲೈ 8 ರಿಂದ ಜುಲೈ 17 ರವರೆಗೆ ಸಾರ್ವಜನಿಕವಾಗಿ ಜನರು ಗುಂಪು ಸೇರದಂತೆ, ಮೆರವಣಿಗೆಗಳನ್ನು ನಡೆಸದಂತೆ, ಪಂಜಾಗಳನ್ನು ಕೂಡಿಸದಂತೆ ಮೊಹರಂ ಹಬ್ಬವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

