ಶ್ರೀ ಬಾಂಧವ್ಯ ಸಂಜೀವಿನಿ ಮಹಿಳಾ ಒಕ್ಕೂಟದಿಂದ ದಾಹ ನೀಗಿಸುವ ಅರವಟಿಗೆ
ಕರುನಾಡ ಬೆಳಗು ಸುದ್ದಿ
ಅಳವಂಡಿ, 8- ತಾಲೂಕಿನ ಅಳವಂಡಿ ಗ್ರಾಮ ಪಂಚಾಯತ್ ನ ಶ್ರೀ ಬಾಂಧವ್ಯ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟಿಕೆ ಯನ್ನು ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಸಾರ್ವಜನಿಕರಿಗಾಗಿ ಸ್ಥಾಪಿಸಲಾಯಿತು.
ಈ ವೇಳೆ ತಾಲೂಕು ಪಂಚಾಯತ ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕರಾದ ವೆಂಕಟೇಶ ಮಾತನಾಡಿ, ದಿನದಿಂದ ದಿನಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಬಿಸಿಲ ತಾಪ ಹೆಚ್ಚುತ್ತಲೇ ಇದೆ. ಅದರಲ್ಲೂ ತಾಲೂಕಿನ ಅಳವಂಡಿಯಲ್ಲಿ ಬಿಸಿಲಿನ ಪ್ರತಾಪ ತುಸು ಹೆಚ್ಚೆ ಎನ್ನುವಂತಿದೆ. ಇಲ್ಲಿನ ಜನ ಮಧ್ಯಾಹ್ನದ ಬಿಸಿಲಲ್ಲಿ ನಾಲ್ಕೈದು ಹೆಜ್ಜೆ ನಡೆಯುವಷ್ಟರಲ್ಲಿ ದಾಹದಿಂದ ಬಸವಳಿಯುತ್ತಿದ್ದಾರೆ. ಅಲ್ಲದೇ ನಾನಾ ಕೆಲಸ-ಕಾರ್ಯಗಳಿಗಾಗಿ ಆಗಮಿಸುವ ಈ ಭಾಗದ ಸುತ್ತಮುತ್ತಲಿನ ಗ್ರಾಮೀಣ ಕಾರ್ಮಿಕರು ಕುಡಿಯುವ ನೀರಿಗಾಗಿ ಪರಿತಾಪ ಪಡುವಂತಾಗಿದೆ.
ನೀರಿಗೆ ಅಂಗಡಿಗಳಲ್ಲಿ 200 ಮಿ.ಲೀ. ನೀರಿನ ಪೌಚ್ಗೆ 2 ರೂ. ದರವಿದೆ. ಅಷ್ಟು ಪ್ರಮಾಣದ ನೀರು ದಾಹ ತಣಿಸುವುದಿಲ್ಲ. ಇನ್ನೂ 1 ಲೀಟರ್ ಮಿನರಲ್ ನೀರಿಗೆ 20 ರೂ. ಹಾಗೂ 2 ಲೀಟರ್ ನೀರಿನ ಬಾಟಲ್ಗೆ 30 ರೂ. ದರವಿದೆ.
ಕೆಲಸಕ್ಕೆಂದು ಬರುವ ಕಾರ್ಮಿಕರು, ಬಡವರು ಅಷ್ಟು ಹಣ ಕೊಟ್ಟು ನೀರು ಖರೀದಿಸುವುದು ಅಷ್ಟಕಷ್ಟೆ. ಹೋಟೆಲ್ ನಲ್ಲಿ ಚಹಾ, ತಿಂಡಿ ಸೇವಿಸುವವರಿಗೆ ಮಾತ್ರ ನೀರು ಕೊಡುತ್ತಾರೆ.
ಬರೀ ನೀರು ಕೇಳಿದರೇ ಅದನ್ನು ನೀಡಲು ಅವರು ಹಿಂದೆ ಮುಂದೆ ನೋಡುವ ಸ್ಥಿತಿ ಇದೆ. ಬಾಟಲ್ನಲ್ಲಿ ನೀರು ತುಂಬಿಕೊಳ್ಳಲಂತೂ ಹೋಟೆಲ್ ದವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇಂಥ ಸ್ಥಿತಿಯಲ್ಲಿ ಅರವಟಿಗೆ ಆರಂಭಿಸಿದ್ದು, ಈ ನೀರಿನ ಗಡಿಗೆಗಳಿಗೆ ಗೋಣಿ ಚೀಲ ಸುತ್ತಿ, ನೀರು ತಂಪಾಗಿರಲು ವ್ಯವಸ್ಥೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜನರು ಅರವಟಿಗೆಯ ನೀರು ಕುಡಿದು, ಇದನ್ನು ಸ್ಥಾಪಿಸಿದ ಸಂಜೀವಿನಿ ಒಕ್ಕೂಟದವರ ಹೊಟ್ಟೆ ತಣ್ಣಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ PDO ರವರಾದ ಕೊಟ್ರಯ್ಯರವರು, ಸಾರಿಗೆ ನಿಲ್ದಾಣ ನಿಯಂತ್ರಕರು, ಒಕ್ಕೂಟದ ಅಧ್ಯಕ್ಷರಾದ ಜಗದೀಶ್ವರಿ, ಪದಾಧಿಕಾರಿಯಾದ ರೇಣುಕಾ, MBK ಮಲ್ಲಮ್ಮ, LCRP ಗೀತಾ, ಪ್ರತೀಭಾ, ಕಾಳಮ್ಮ, ಕೃಷಿ ಸಖಿ ಕಾವೇರಿ, ಪಶು ಸಖಿ ಸಲಿಮಾ ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತಿರಿದ್ದರು.
