WhatsApp Image 2024-02-03 at 4.16.17 PM

24ರಂದು ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಅಲೆಮಾರಿಗಳ ಜಿಲ್ಲಾ ಜಾಗೃತಿ ಸಮಾವೇಶ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,3- ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಎಸ್‍ಸಿ., ಎಸ್‍ಟಿ ಮತ್ತು ಓಬಿಸಿ ಅಲೆಮಾರಿಗಳನ್ನು ಕಡೆಗಣಿಸುತ್ತಾ ಬರಲಾಗುತ್ತಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಜನಾಂಗಗಳಿಗೆ ಪ್ರಾತಿನಿಧ್ಯ ನೀಡಲಿರುವ ಹಿನ್ನೆಲೆಯಲ್ಲಿ ಇದೇ ಫೆ.24 ರಂದು ಜಿಲ್ಲಾ ಮಟ್ಟದ ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಅಲೆಮಾರಿಗಳ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ.

ಗಾಂಧಿ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ಫೆ.24ರಂದು ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ಧಿ ಸಚಿವರು, ಯವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ನಾಗೇಂದ್ರ ಇವರೊಂದಿಗೆ ಚರ್ಚಿಸಲಾಗಿದೆ. ವಾಲ್ಮೀಕಿ ಭವನದಲ್ಲಿ ಅಂದು 5 ಸಾವಿರಕ್ಕೂ ಅಧಿಕ ಅಲೆಮಾರಿಗಳು ಸೇರಲಿದ್ದು ಸಚಿವ ನಾಗೇಂದ್ರ ಅವರು ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಎಸ್‍ಸಿ, ಎಸ್‍ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.

ಎಸ್‍ಸಿ, ಎಸ್‍ಟಿ, ಓಬಿಸಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಅಲೆಮಾರಿ/ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಜನಾಂಗದ ಮುಖಂಡರು ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದು, ಕಾಂತರಾಜ ಆಯೋಗದ ವರದಿ ಯನ್ನು ಸರ್ಕಾರ ಸ್ವೀಕರಿಸಿ ಜಾರಿಗೊಳಿಸಲು ಸಚಿವ ಬಿ.ನಾಗೇಂದ್ರ ಹಾಗೂ ಮುಖ್ಯ ಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ.

ಭಕ್ತವತ್ಸಲಂ ಆಯೋಗದ ಶಿಫಾರಸ್ಸು ಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸುವುದು, ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಅಲೆಮಾರಿಗಳಿಗೆ ವಸತಿ ಸೌಕರ್ಯ ಒದಗಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್‍ಸಿ, ಎಸ್‍ಟಿ ಅಲೆಮಾರಿಗಳಿಗಾಗಿ ಪ್ರತ್ಯೇಕ ಆಯೋಗ ರಚಿಸಲು ಒತ್ತಾಯಿಸುವುದು, ಎಲ್ಲ ಹಿಂದುಳಿದ ವರ್ಗದ ಅಲೆಮಾರಿಗಳಿಗೆ ಪ್ರತ್ಯೇಕ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವುದು, ಹಿಂದುಳಿದ ವರ್ಗದ ಅಲೆಮಾರಿಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಸ್ಥಗಿತಗೊಂಡಿರುವ ಭೂ ಒಡೆತನದಂತಹ ಹಲವಾರು ಯೋಜನೆಗಳನ್ನು ಮರು ಸ್ಥಾಪಿಸುವುದು, ಎಲ್ಲ ಹಿಂದುಳಿದ ಸಮುದಾಯದಲ್ಲಿರುವ ಬಿಕ್ಕಟ್ಟನ್ನು ಬಗೆಹರಿಸಲು ಪರಸ್ಪರ ಸಮನ್ವಯತೆ ಸಾಧಿಸುವುದು ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು ಎಂದು ಅವರು ಹೇಳಿದರು.

ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಈ ಎಲ್ಲ ಸಮುದಾಯಗಳು ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ತುಂಬಾ ಹಿಂದುಳಿದಿವೆ. ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಈ ಸಮುದಾಯಕ್ಕೆ ಸರ್ಕಾರಗಳು ಕಡೆಗಣಿಸುತ್ತಾ ಬಂದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಈ ಜನಾಂಗಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದು, ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸ ಇದೆ. ಇದೊಂದು ಐತಿಹಾಸಿಕ ಸಮಾವೇಶ ಆಗಲಿದ್ದು, 5 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ ಸಂಡೂರು, ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ನಗರದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಲೆಮಾರಿ ಸಮುದಾಯದ ಧುರೀಣರಾದ ಡಾ.ಸಿದ್ಧರಾಮ ದಾದಾರಾವ್ ವಾಘಮಾರೆ, ಕೆಪಿಸಿಸಿ ಉಪಾಧ್ಯಕ್ಷರಾದ ಗೋಪಾಲ್ ಸೇರಿದಂತೆ ಅನೇಕ ಧುರೀಣರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಎಸ್‍ಸಿ, ಎಸ್‍ಟಿ ಮತ್ತು ಓಬಿಸಿ ಅಲೆಮಾರಿಗಳ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಯ್ಯ ಡಿ., ಮುಖಂಡರಾದ ರಾಮಯ್ಯ, ರಾಮಾಂಜಿನಿ, ರಾಮು, ಹನುಮಂತಪ್ಪ, ಕುಮಾರ್, ಖಂಡೆಪ್ಪ, ಮಹೇಶ್, ರಾಮಚಂದ್ರ, ತೋಳಪ್ಪ ಮತ್ತು ಕರೆಪ್ಪ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!