25ರಂದು ಗಂಗಾಮತಸ್ಥ ಸಮುದಾಯದಿಂದ ರಾಜ್ಯಮಟ್ಟದ ಸಮಾವೇಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,11- ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರ್ಪಡೆ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 25ರಂದು ಕಲಬುರಗಿಯಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗಂಗಾಮತಸ್ಥರ ಸಂಘದ ಪದಾಧಿಕಾರಿಗಳು ಹೇಳಿದರು.
ಕೋಲಿ, ಕಬ್ಬಲಿಗೆ, ಬೆಸ್ತ, ಬಾರ್ಕೆರ, ಗಂಗಾಮತ ಹೀಗೆ 38 ಪರ್ಯಾಯ ಪದಗಳಿಂದ ಕರೆಯಲಾಗುವ ಸಮುದಾಯಗಳ ರಾಜ್ಯಮಟ್ಟದ ಸಮಾವೇಶ ಇದಾಗಿದ್ದು, ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ತೊನಸನಹಳ್ಳಿಯ ಮಲ್ಲಣ್ಣಪ್ಪ ಮುತ್ಯ ಸ್ವಾಮೀಜಿ ಪಾಲ್ಗೊಳ್ಳುವರು ಎಂದು ಸಂಘದ ಜಿಲ್ಲಾಧ್ಯಕ್ಷ ಸೋಮಣ್ಣ ಬಾರ್ಕೆರ ಹಾಗೂ ಇತರರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಬೇಡಿಕೆ ಈಡೇರಿಕೆಗಾಗಿ ಮೂರು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. 2018ರ ಲೋಕಸಭಾ ಚುನಾವಣೆ ವೇಳೆ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ನಿಮ್ಮ ಸಮುದಾಯಕ್ಕೆ ಎಸ್.ಟಿ. ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಇನ್ನೊಂದು ಚುನಾವಣೆ ಬಂದರೂ ಬೇಡಿಕೆ ಈಡೇರಿಲ್ಲ. ಈಗ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು, ಬಳಿಕ ಅದನ್ನು ಕೇಂದ್ರ ಅಂಗೀಕರಿಸಬೇಕು. ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಸಮಾವೇಶದ ಬಳಿಕ ಮುಂದಿನ ನಡೆ ನಿರ್ಧರಿಸಲಾಗುವುದು’ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಸಮಾಜದ ಅಂದಾಜು 40 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಸಮಾವೇಶದಲ್ಲಿ 20 ಸಾವಿರ ಜನರನ್ನು ಕರೆದುಕೊಂಡು ಹೋಗುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ ವಾಹನ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಸಮಾಜದ ಜನ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ರಾಜಶೇಖರ ಮುಷ್ಟೂರು, ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಮಡ್ಡೇರ್, ಗೌರವ ಸಲಹೆಗಾರ ಯಮನಪ್ಪ ಕಬ್ಬೇರ, ಕನಕಗಿರಿ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಜೆ. ರಾಜಶೇಖರ, ಕೊಪ್ಪಳ ತಾಲ್ಲೂಕು ಅಧ್ಯಕ್ಷ ಹುಲಗಪ್ಪ ಬಾರಕೇರ ಪಾಲ್ಗೊಂಡಿದ್ದರು.
