ಕೃಷಿ ಅರಣ್ಯ ಪದ್ಧತಿಯ ಮೂಲಕ ಜಾಗತಿಕ ತಾಪಮಾನವನ್ನು ತಡೆಗಟ್ಟಬಹುದು : ರಮೇಶ ಬಳೂಟಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ಕೃಷಿ ಕುಟುಂಬಗಳು ಕೇವಲ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯದೆ ಅದರ ಜೊತೆಗೆ ಸ್ವಲ್ಪ ಕೃಷಿ ಅರಣ್ಯ ಪದ್ಧತಿಯನ್ನು ಅಳವಡಿಸಿಕೊಂಡರೆ ಜಾಗತಿಕ ತಾಪಮಾನವನ್ನು ತಡೆಗಟ್ಟಬಹುದು ಎಂದು ಪರಿಸರವಾದಿ ರಮೇಶ ಬಳೂಟಗಿ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಎಸ್ ಎಫ್ ಎಸ್ ಐಸಿಎಸ್ಇ ಶಾಲೆ ಹಾಗೂ ಎಸ್ ಎಫ್ ಎಸ್ ಹೈಸ್ಕೂಲ್ ಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡುತ್ತ ಈ ಭಾಗ ಬಿಸಿಲನಾಡು ಬರದ ನಾಡು ಎಂದು ಕರೆಯಿಸಿಕೊಳ್ಳುತ್ತಿದೆ, ಉತ್ತಮವಾದ ಗಿಡಮರಗಳನ್ನು ಬೆಳೆಸುವ ಮೂಲಕ ಅದ್ಭುತ ಸುಂದರ ನಾಡನ್ನು ಕಟ್ಟಬಹುದು ಎಂದರು.
ಬೆಲೆಬಾಳುವಂತಹ ಶ್ರೀಗಂಧದ ಮರ, ರಕ್ತಚಂದನ, ಮಹಾಗನಿ, ರೋಸ್ ವುಡ್ ಮುಂತಾದ ಮರಗಳನ್ನು ಬೆಳೆಸುವ ಮೂಲಕ ನಮ್ಮ ಆರ್ಥಿಕ, ಬದುಕಿನ ಜೊತೆಗೆ ಆರೋಗ್ಯದ ಬದುಕು, ಆದರ್ಶದ ಬದುಕು ಮತ್ತು ಆಧ್ಯಾತ್ಮಿಕ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಜಾಗತಿಕ ತಾಪಮಾನದಿಂದಾಗಿ ಜೀವ ಸಂಕುಲಗಳ ಮೇಲೆ ಅಪಾರವಾದ ಪರಿಣಾಮ ಬೀರುತ್ತಿದೆ ಆದ್ದರಿಂದ ವಿಶ್ವ ಪರಿಸರ ದಿನಾಚರಣೆಯನ್ನು ಎಲ್ಲೆಡೆ ಪ್ರತಿದಿನ ಆಚರಿಸುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ರಸ್ತೆ ಜಾಥಾಮೂಲಕ ಸಾರ್ವಜನಿಕರಿಗೆ ಸಸಿಗಳನ್ನು ವಿವರಿಸಿದರು. ‘ ಪರಿಸರ ಕಾಪಾಡೋಣ , ಸ್ವಚ್ಛ ಪರಿಸರ ಸುಂದರ ಪರಿಸರ ನಿರ್ಮಿಸೋಣ ‘ ಎಂದು ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಜಾಗೃತಿ ಮೂಡಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಡು, ನೃತ್ಯನಾಟಕಗಳನ್ನು ಪ್ರದರ್ಶಿಸಿದರು.
ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು.
ಕಾರ್ಯಕ್ರಮದ ವೇದಿಕೆಯ ಮೇಲೆ ಎಸ್ಎಫ್ಎಸ್ ಐಸಿಎಸ್ಇ ಶಾಲೆ ಪ್ರಾಂಶುಪಾಲರಾದ ಫಾ. ಜಬಮಲೈ ಎಸ್ಎಫ್ಎಸ್ ಹೈಸ್ಕೂಲ್ ಪ್ರಾಂಶುಪಾಲರಾದ ಫಾ. ಜೋಜೋ ಸಂಸ್ಥೆ ವ್ಯವಸ್ಥಾಪಕರಾದ ಫಾ. ಮ್ಯಾಥ್ಯೂ ರವರು ಉಪಸ್ಥಿತರಿದ್ದರು.

