2c136fae-be38-4577-97e1-318669006cc9

ನವಜಾತ ಶಿಶು ಶವ ಪತ್ತೆ : ಪ್ರಕರಣ ದಾಖಲು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 14- ಕುಷ್ಟಗಿ ತಾಲ್ಲೂಕಿನ ಬೆನಕನಾಳ ವಲಯದ ಹನುಮಸಾಗರ-ಬೆನಕನಾಳ ರಸ್ತೆಯ ಪಕ್ಕದಲ್ಲಿ ಜೂನ್ 12 ರ ಬೆಳಿಗ್ಗೆ 07.30 ಗಂಟೆಗೆ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದ್ದು, ಈ ಬಗ್ಗೆ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹನುಮಸಾಗರ-ಬೆನಕನಾಳ ರಸ್ತೆಯ ಪಕ್ಕದಲ್ಲಿ ಬೆಳಗಿನ ಜಾವ 5 ಗಂಟೆಯಿ0ದ 06.30 ಗಂಟೆಯ ಅವಧಿಯಲ್ಲಿ ನವಜಾತ ಗಂಡು ಶಿಶುವನ್ನು ಯಾರೋ ಎಸೆದು ಹೋಗಿದ್ದು, ಪತ್ತೆಯಾದಾಗ ಶಿಶು ಮೃತಪಟ್ಟಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಔಟ್‌ರೀಚ್ ವರ್ಕರ್ ದೇವರಾಜ ತಿಲಗರ್ ಹಾಗೂ ಕುಷ್ಟಗಿ ತಾಲ್ಲೂಕಿನ ಬೆನಕನಾಳ ಬಲಯದ ಅಂಗನವಾಡಿ ಮೇಲ್ವಿಚಾರಕಿ ಶೋಭಾ ಅವರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ್ದು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ನಿರ್ದೇಶನದ ಮೇರೆಗೆ ನವಜಾತ ಶಿಶುವನ್ನು ಎಸೆದು ಹೋದವರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೇವರಾಜ ತಿಲಗರ್ ರವರು ಹನುಮಸಾಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ರನ್ವಯ ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಬಿಸಾಡದೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬಹುದಾಗಿದೆ.

ಹಾಜರುಪಡಿಸಿದವರ ಮಾಹಿತಿಯನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಅಥವಾ 1098-112 ಮಕ್ಕಳ ಉಚಿತ ಸಹಾಯವಾಣಿ ಮೂಲಕ ಮಾಹಿತಿ ನೀಡಬಹುದಾಗಿದೆ. ಆ ಮಗುವಿನ ಪೋಷಣೆ ಮತ್ತು ರಕ್ಷಣೆಯ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ. ನಂತರ ಮಗುವಿನ ಸೂಕ್ತ ಪಾಲನೆ, ಪೋಷಣೆ, ಪುನರವಸತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!