3

ಹುಲಿಗಿ ಗ್ರಾಮ ಪಂಚಾಯತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 14- ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಜೂನ್ 13 ರಂದು ಹುಲಿಗಿ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಹಾಗು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮದಲ್ಲಿನ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ಕ್ರಮ ಕೈಗೊಂಡು ಪರಿಹರಿಸಬೇಕು. ಗ್ರಾಮದಲ್ಲಿ ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳಿಗೆ ವಿಳಂಬ ಮಾಡದೆ ಕೂಲಿ, ಸಾಮಗ್ರಿ ಹಣ ಪಾವತಿಸಬೇಕು.

ಕೂಲಿ ಅರಸಿ ಬಂದವರಿಗೆ ಕೂಲಿ ಕೆಲಸ ನೀಡತಕ್ಕದ್ದು. 2024-25ನೇ ಸಾಲಿನಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ತುರ್ತಾಗಿ ಮುಕ್ತಾಯಗೊಳಿಸಬೇಕು. ವಸತಿ ಯೋಜನೆಯಡಿ ಮಂಜೂರಾದ ಮನೆಗಳು ಅಪೂರ್ಣವಿದ್ದಲ್ಲಿ ಅವರಿಗೆ ನೋಟಿಸ್ ನೀಡಿ ಕಾಲಮಿತಿಯೊಳಗೆ ಮುಕ್ತಾಯಗೊಳಿಸಲು ಪಿಡಿಒ ಕ್ರಮವಹಿಸಬೇಕು ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಮತ್ತು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.

ಗ್ರಾಮದಲ್ಲಿ ಸಂತೆಕಟ್ಟೆ ನಿರ್ಮಾಣ ಅವಶ್ಯವಿರುವ ಕುರಿತು ಸಭೆಯಲ್ಲಿ ಹಾಜರಿದ್ದ ಸದಸ್ಯರು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು. ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ನಲ್ಲಿಗಳ ಜೋಡಣೆ ಬಾಕಿ ಇರುತ್ತದೆ. ಎಲ್ಲಾ ಕಾಲೋನಿಯಲ್ಲಿ ಸಿಮೆಂಟ್ ರಸ್ತೆ ಒಡೆದು ನಲ್ಲಿ ಜೋಡಣೆ ಮಾಡಲಾಗಿದ್ದು, ಪುನಃ ಸಿಮೆಂಟ್ ರಸ್ತೆ ಸರಿಪಡಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸಿಇಒ ಸೂಚಿಸಿದರು. ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಗ್ರಾಮದಲ್ಲಿ ಅವಶ್ಯವಿರುವ ಕಟ್ಟಡಗಳ ಕುರಿತು ಸದಸ್ಯರು ಸಭೆಯಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರು.

ನಂತರ ಹುಲಿಗೆಮ್ಮ ದೇವಸ್ಥಾನದ ಹತ್ತಿರ ಚರಂಡಿ ವ್ಯವಸ್ಥೆ, ಗೌರವ ಘಟಕದ ಸುತ್ತಲೂ ಇರುವ ವ್ಯವಸ್ಥೆ ಪರಿಶೀಲಿಸಿದರು. ದೇವಸ್ಥಾನದ ಸುತ್ತಲೂ ಸ್ವಚ್ಛತೆಯನ್ನು ಕಾಪಾಡುವಂತೆ ಹಾಜರಿದ್ದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು. ನಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಂಡ ಫಲಾನುಭವಿ ಚಿನ್ನಮ್ಮ ಚಂದ್ರಪ್ಪ ಕಾಯಗಡ್ಡಿ ಇವರ ಮುಕ್ತಾಯ ಹಂತದ ಮನೆಗೆ ಭೇಟಿ ನೀಡಿ ಖುದ್ದು ವೀಕ್ಷಣೆ ಮಾಡಿ ಸಹಾಯಧನ ಜಮೆಯಾಗಿರುವ ಬಗ್ಗೆ ಖಚಿತಪಡಿಸಿಕೊಂಡರು. ವೈಯಕ್ತಿಕ ಶೌಚಾಲಯ ಸಹ ನಿರ್ಮಿಸಿಕೊಂಡು ಕಡ್ಡಾಯವಾಗಿ ಬಳಕೆ ಮಾಡುವಂತೆ ಸೂಚಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು. ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿಕೊಂಡ ಭೋಜನಾಲಯವು ಬಳಕೆಯಾಗುತ್ತಿರುವ ಕುರಿತು ಭೋಜನಾಲಯದಲ್ಲಿ ಹಾಜರಿದ್ದ ಮಕ್ಕಳ ಜೊತೆ ಚರ್ಚಿಸಿದರು. ಶಾಲೆಯಲ್ಲಿ ಹಾಜರಿದ್ದ ಮಕ್ಕಳ ಜೊತೆ ವೈಯಕ್ತಿಕ ಶೌಚಾಲಯಗಳ ಇರುವ ಬಗ್ಗೆ ಹಾಗೂ ಬಳಕೆ ಕುರಿತು ಮಾಹಿತಿ ಪಡೆದರು.

ಈ ಸಂದರ್ಭ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಪಂಚಾಯತ ರಾಜ್ ಸಹಾಯಕ ನಿರ್ದೇಶಕ ಮಹೇಶ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಲಾಸ್ ಬೋಸ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಶಂಕ್ರಯ್ಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಯಶ್ರೀ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಹುಲಿಗಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತ್ತುಗುಂಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ನೀಲಮ್ಮ ಗುಂಗಾಡಿ, ಉಪಾಧ್ಯಕ್ಷ ಸೈಯದ್ ನ್ಯಾಮತ್ ಅಲಿ, ತಾಲೂಕ ಪಂಚಾಯತ ನಾಮನಿರ್ದೇಶಿತ ಕೆಡಿಪಿ ಸದಸ್ಯೆ ನಾಗರತ್ನ ಪೂಜಾರ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಜನಾರ್ಧನ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜೀವನಸಾಬ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕ್ರಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರುನಗೌಡ, ಪಂಚಾಯತ ಅಭಿವೃದ್ದಿ ಅಧಿಕಾರಿ ಗುರುದೇವಮ್ಮ, ಸದಸ್ಯರಾದ ರಮೇಶ್ ಪೂಜಾರ, ಖಾಜಾವಲಿ ಜವಳಿ, ನಾಗರಾಜ ನರೇಗಲ್, ಜಿಯಾಸಾಬ, ಟಿ.ಕಿಶೋರ ಕುಮಾರ, ಕಾರ್ಯದರ್ಶಿ ನಾಗರಾಜ, ವಿವಿಧ ತಾಲೂಕ ಮಟ್ಟದ ಅಧಿಕಾರಿಗಳು, ಮಹಾತ್ಮ ಗಾಂಧಿ ನರೇಗಾ, ಸಂಜೀವಿನಿ ಯೋಜನೆಗಳ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!