ಜಿಂದಾಲ್ ಕಂಪನಿಗೆ ಭೂಮಿ : ವಾಪಸ್ ಪಡೆಯಲು ಆಗ್ರಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ರಾಜ್ಯ ಸರ್ಕಾರ 3677 ಎಕರೆ ಭೂಮಿಯನ್ನು ಜಿಂದಾಲ್ ಎಂಬ ಖಾಸಗಿ ಕಂಪನಿಗೆ ಕೊಟ್ಟಿರುವ ಕ್ರಮವನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಆ ಭೂಮಿಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತದೆ.
ರಾಜ್ಯದಲ್ಲಿ ಭೂರಹಿತ ಲಕ್ಷಾಂತರ ಬಡ ಜನರು ಫಾರಂ ನಂ. 50-53-57ರಲ್ಲಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಹಲವು ದಶಕಗಳಿಂದ ಕಾಯುತ್ತಿದ್ದರೂ ಇಲ್ಲದ ಸಬೂಬು ಹೇಳುತ್ತಲೇ ತುಂಡು ಭೂಮಿಯನ್ನೂ ಮಂಜೂರು ಮಾಡದೆ ನಯವಾಗಿ ವಂಚಿಸುತ್ತಾ ಬರಲಾಗುತ್ತಿದೆ. ಆದರೆ ಕಂಪನಿಗಳಿಗೆ ಭೂಮಿ ಕೊಡುವುದನ್ನೇ ಸರ್ಕಾರ ಅಭಿವೃದ್ದಿ ಎಂದು ಭಾವಿಸದಂತಿದೆ. ಆ ಮೂಲಕ ಕಂಪನಿಗಳ ಹಿತಾಸಕ್ತಿ ಕಾಯುತ್ತಿರುವ ಸರ್ಕಾರಗಳಿಗೆ ಬಡ ಜನರ ಬಗ್ಗೆ ಕಾಳಜಿ ಇಲ್ಲವಾಗಿದೆ. ಆಳುವವರು ಜನರಿಂದ ಆಯ್ಕೆ ಆಗಿದ್ದಾರೋ, ಕಂಪನಿಗಳು ಕೊಡುವ ಕಮೀಷನ್ ಮೇಲೆ ಆಯ್ಕೆ ಆಗಿದ್ದಾರೋ ಎಂಬ ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳುತ್ತಿದ್ದೇವೆ.
ಅಭಿವೃದ್ದಿ ಹೆಸರಲ್ಲಿ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡುವ ಸರ್ಕಾರ, ಸಾಮಾನ್ಯ ಜನರಿಗೆ ಅದರ ಹತ್ತು ಪಟ್ಟು ಬೆಲೆಗೂ ನೀಡುವುದಿಲ್ಲ. ಅಭಿವೃದ್ದಿ ಎಂದು ಖಾಸಗಿ ಕಂಪನಿಗಳಿಗೆ ಭೂಮಿ ಮಾರುವ ಬದಲು ಸರ್ಕಾರವೇ ಉದ್ಯಮ ನಡೆಸಿದರೆ ನೈಸರ್ಗಿಕ ಸಂಪತ್ತು ಸರ್ಕಾರದ ಬಳಿಯೇ ಉಳಿಯುತ್ತದೆಯಲ್ಲವೇ? ಹಿಂದಿನ ಸರ್ಕಾರ ಮಠಮಾನ್ಯಗಳಿಗೆ, ಕಾರ್ಪೋರೇಟ್ ಕಂಪನಿಗಳಿಗೆ, ಟ್ರಸ್ಟ್ಗಳಿಗೆ ಭೂಮಿಯನ್ನು ನೀಡುವ ಮೂಲಕ ಜನ ವಿರೋಧಿಯಾಗಿ ನಡೆದುಕೊಂಡಿತ್ತು, ಈಗಿನ ಸರ್ಕಾರ ಅವರಿಗಿಂತ ತಾನೇನು ಕಮ್ಮಿಯಿಲ್ಲ ಎಂಬಂತೆ ವರ್ತಿಸುತ್ತಿದೆ. ಬಡ ಜನರ ವಿರೋಧಿ ನಡವಳಿಕೆಯಲ್ಲಿ ಎಲ್ಲಾ ಸರ್ಕಾರಗಳೂ ಒಂದೇ ಎಂಬುದು ಸಾಭೀತಾಗುತ್ತಿದೆ.
‘ಉಳುವವನೇ ಭೂಒಡೆಯ’ ನೀತಿಯ ಜಾರಿಯ ಪರಿಣಾಮ ಒಂದಷ್ಟು ಜನರು ಭೂಮಿಯ ಹಕ್ಕನ್ನು ಪಡೆದುಕೊಂಡರು. ಆದರೆ ಈಗ ಅದೇ ಭೂಮಿಗಳನ್ನು ಕೈಗಾರಿಕೆಗಳ ಸ್ಥಾಪನೆ ಹೆಸರಲ್ಲಿ ಕಿತ್ತುಕೊಂಡು ಜನರನ್ನು ಬೀದಿಪಾಲು ಮಾಡಲಾಗುತ್ತಿದೆ. ಮತ್ತೊಂದು ಕಡೆ ತುಂಡು ಭೂಮಿಯಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ರೈತ ಸಮುದಾಯ ಅತ್ಯಂತ ಸಂಕಷ್ಟದಲ್ಲಿ, ಸಾಲದ ಹೊರೆಯಲ್ಲಿ ಬದುಕುವಂತಾಗಿದೆ. ಬಡ ಜನರಿಗೆ ಭೂಮಿಯ ಹಕ್ಕೂ ನೀಡದೆ, ಭೂಮಿ ಇರುವ ರೈತರನ್ನು ತಮ್ಮದೇ ಭೂಮಿಗಳಲ್ಲಿ ಬದುಕಲೂ ಬಿಡದೆ, ಸರ್ಕಾರ-ಕಾರ್ಪೋರೇಟ್ ಕಂಪನಿಗಳು ಅಡಕತ್ತರಿಯಲ್ಲಿ ಸಿಲುಕಿಸಿ ಶೋಷಣೆ ಮಾಡುತ್ತಿವೆ.
ಸರ್ಕಾರಗಳು ಇಂತಹ ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು, ಬಗರ್ಹುಕುಂ ಸಾಗುವಳಿದಾರರಾದ ಬಡ ಜನರಿಗೆ ಭೂಮಿಯ ಮಂಜೂರಾತಿ ನೀಡಬೇಕು, ಕೈಗಾರಿಕೆಯ ಹೆಸರಲ್ಲಿ ಫಲವತ್ತಾದ ಭೂಮಿಗಳನ್ನು ಕಂಪನಿಗಳಿಗೆ ನೀಡುವುದನ್ನು ನಿಲ್ಲಿಸಬೇಕಲ್ಲದೆ ಕೈಗಾರಿಕೆ ಕಾರಿಡಾರ್ ಹೆಸರಲ್ಲಿ ಸಾವಿರಾರು ಎಕರೆ ಸಂಪದ್ಬರಿತ ಭೂಮಿಗಳನ್ನು ಕಾರ್ಪೋರೇಟ್ ಕಂಪನಿಗಳ ಒಡಲಿಗೆ ಹಾಕುವ ಯಾವ ಜಾರಿಗೊಳಿಸಬಾರದೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ.
