2c136fae-be38-4577-97e1-318669006cc9

ಸಾಮೂಹಿಕ ವಿವಾಹಗಳ ಮಾಡಿಸಿ ಮಾನವೀಯತೆ ಮೆರೆದ ದಲಿತ ಸಮುದಾಯ

ಕರುನಾಡ ಬೆಳಗು ಸುದ್ದಿ

ವಿಜಯನಗರ, 11- ಮದುವೆಗೆ ಸಾಲ ಸೂಲಾ ಮಾಡಿ ಕಷ್ಟಕ್ಕೆ ಸಿಲುಕುವ ಬಡ ಕುಟುಂಬಗಳಿಗೆ ಹೊರೆಯಾಗಬಾರದು ಎನ್ನುವ ದೃಷ್ಟಿಯಿಂದ ಡಾ.ಅಂಬೇಡ್ಕರ್ ನಗರದ ಜನ ಪ್ರತಿವರ್ಷ ಸಾಮೂಹಿಕ ವಿವಾಹಗಳನ್ನು ಮಾಡಿಸುತ್ತಿರುವುದು ಬೇರೊಂದು ಸಮಾಜಕ್ಕೆ ಮಾದರಿಯಾಗಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸೈಯದ್ ಸಮೀವುಲ್ಲಾ ಹೇಳಿದರು.

ಹೆಚ್ಚಿನ ಹಣ ಖರ್ಚು ಮಾಡಿ ಮದುವೆ ಮಾಡಿಸಿ ಇನ್ನಷ್ಟು ಕಷ್ಟ ಅನುಭವಿಸಬಾರದು ಮದುವೆಯ ನಂತರ ಸಾಲವಿಲ್ಲದೆ ಸಂತೋಷದಿಂದ ಬಾಳಬೇಕು ಎಂದು ಪ್ರತಿವರ್ಷ ಸಾಮೂಹಿಕ ಮದುವೆಗಳನ್ನು ಮಾಡಿಸುವ ಕಾರ್ಯಗಳನ್ನು ಮಠದ ಕಡೆಯಿಂದ ಮಾಡುತ್ತಿರುವುದು ನಮಗೆ ಅತೀವ ಸಂತಸ ತಂದಿದೆ ಇದೇ ರೀತಿ ಎಲ್ಲಾ ಸಮಾಜಗಳಲ್ಲಿ ಬಡವರಿಗೆ ಮದುವೆ ಮಾಡಿಸುವ ಕಾರ್ಯಗಳು ನಡೆಯಬೇಕು ಎಂದರು.

ಇಲ್ಲಿನ ಹಂಪಿಗೆ ಕೇವಲ 1 ಕಿಲೋ ಮೀಟರ್ ನಷ್ಟೇ ದೂರವಿರುವ ಕಮಲಾಪುರ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ನಗರದ ವ್ಯಾಪ್ತಿಗೆ ಬರುವ ಶ್ರೀ ಗುರು ವೀರೇಶಪ್ಪ ಅವದೂತರ ಮಠ ಮತ್ತು ಜ್ಞಾನಶ್ರಮದ ಟ್ರಸ್ಟ್ ಕಡೆಯಿಂದ ಈ ಬಾರಿ 13 ಜೋಡಿಗಳಿಗೆ ಸಪ್ತಪದಿತುಳಿಸುವ ಮೂಲಕ ವಿವಾಹ ಮಾಡಿಸುವ ಕಾರ್ಯಕ್ರಮದಲ್ಲಿ ಹೇಳಿದರು.

ವರದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಮಾತನಾಡಿ ವಿರೇಶಪ್ಪ ಅವರ 50 ನೇ ಪುಣ್ಯ ಸ್ಮರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಮೂಹಿಕ ಮದುವೆಗಳು ಸಮಾಜ ಹಿಂದಿನಿಂದಲೂ ಜಾತ್ಯಾತೀತವಾಗಿ ಮಾಡಿಸುತ್ತಾ ಬಂದಿದೆ ಎಂದು ಕೇಳಿದ್ದೆ ಇಂದು ಕಣ್ಣಾರೆ ನೋಡುವ ಭಾಗ್ಯ ನನಗೆ ಸಿಕ್ಕಿದೆ.

ಈ ಧಾರ್ಮಿಕ ಮದುವೆ ವ್ಯವಸ್ಥೆಗಳು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಈ ಸಂಬಂಧ ಬಡ ಕುಟುಂಬಗಳ ತಂದೆ ತಾಯಿಗಳಿಗೆ ನನ್ನ ಮಕ್ಕಳಿಗೆ ನಾನು ಮದುವೆ ಮಾಡಬಹದು ಎನ್ನುವ ಆತ್ಮಸ್ಥೈರ್ಯ ತಂದಿದೆ. ಹಣದುಬ್ಬರದಿಂದ ತತ್ತರಿಸಿರಿವಂತ ಅದೆಷ್ಟೋ ಬಡ ಕುಟುಂಬಗಳಿಗೆ ವೀರೇಶಾನಂದ ಅವಧೂತರ ಮಠ ಬಡ ಜನಗಳಿಗೆ ಮದುವೆ ಮಾಡಿಕೊಳ್ಳಲು ದಾರಿದೀಪವಾಗಿದೆ. ಇದರ ಜೊತೆಗೆ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯುವಕರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಕುರಿತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಾ ಹುಸೇನ್ ಮಾತನಾಡಿ ಮದುವೆ ಎಂಬುದು ಇಬ್ಬರ ನಡುವೆ ಎರಡು ಮನಸ್ಸುಗಳ ಸಮ್ಮಿಲನ, ಕಲ್ಯಾಣ ಕಾರ್ಯಗಳು ಇಂತಹ ಮಠಮಾನ್ಯಗಳಲ್ಲಿ ನಡೆಯುವುದೆಂದರೆ ಇದು ನಮ್ಮ ಪೂರ್ವಜರ ಪುಣ್ಯ, ಮದುವೆಯೆಂಬ ಈ ಸಾಗರದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳುವುದೇ ನಿಜವಾದ ಸಂಬಂಧ.ಆಡಂಬರದ ಕಲ್ಯಾಣಕ್ಕಾಗಿ ಹೆಚ್ಚಿನ ಹಣ ವ್ಯಯ ಮಾಡುವ ಬದಲು ಹಣ ಶಿಕ್ಷಣಕ್ಕಾಗಿ ಬಳಸಿ ಶಿಕ್ಷಣದಿಂದ ಅವರ ಬದುಕು ಹಸನಾಗುತ್ತದೆ ಇಂತಹ ಕೆಲಸಗಳಿಗೆ ನಾವು ಸದಾಕಾಲ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಆನಂದ್ ಸಿಂಗ್ ನವ ಜೋಡಿಗಳಿಗೆ ಅಕ್ಷತಾ ಹಾಕುವ ಮೂಲಕ ಆಶೀರ್ವದಿಸಿ ಉತ್ತಮ ಜೀವನದ ಬದುಕಿಗೆ ಸಲಹೆ ನೀಡಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೆಚ್ ಗೋಪಾಲಕೃಷ್ಣ ಮಾತನಾಡಿ ಕಳೆದ 25 ವರ್ಷಗಳ ಹಿಂದೆ ಮಠದ ಸಂಸ್ಥಾಪರಾದ ಶ್ರೀ ಪಂಪಾನಂದರು ಹಾಗೂ ಡಾ. ಅಂಬೇಡ್ಕರ್ ನಗರದ ಪ್ರಮುಖರ ಸಮ್ಮುಖದಲ್ಲಿ ಮೌಡ್ಯ ವಿರೋಧಕ್ಕೆ ಸಮರ ಸಾರುತ್ತಾ ಪ್ರಪ್ರಥಮವಾಗಿ ಊರಚೆ ಸ್ಮಶಾನಕ್ಕೆ ಅಂಟಿಕೊಂಡಿರುವ ಮಠದ ಜಾಗದಲ್ಲಿ 5 ಜೋಡಿಗಳಿಗೆ ಏಳು ಹೆಜ್ಜೆಗಳ ಸಂಬಂಧ ಜೋಡಿಸುವ ಮೂಲಕ ಮದುವೆಗೆ ಚಾಲನೆ ನೀಡಿದ್ದು ನನಗೆ ನೆನಪಿದೆ.

ಪ್ರತಿವರ್ಷ ಪಂಪಾನಂದ ಮತ್ತು ಹನುಮಂತಪ್ಪ (ವೀರ ಬಸಪ್ಪ ) ಕೆಎಂ ಅಂಬೇಶ್ವರ, ಯಮುನಪ್ಪ,ಹೇಮಗಿರಿಯಪ್ಪ,ಗಂಟಿ ಗಂಗಪ್ಪ, ಅಧ್ಯಾತ್ಮಿಕ ಚಿಂತಕರಾದ ಇವರುಗಳ ಪರಿಶ್ರಮದ ಫಲವಾಗಿ ವೀರೇಶಪ್ಪಮಠ ಮತ್ತು ಜ್ಞಾನಾಶ್ರಮದಿಂದ ಸಾಮೂಹಿಕ ಮದುವೆಗಳು ನಡೆಯುತ್ತಲೇ ಬಂದಿವೆ ಸಮಾಜ ಇಂತಹ ಪವಿತ್ರ ಕಾರ್ಯಕ್ಕೆ ನಿಂತಿರುವುದು ಒಳ್ಳೆಯ ಸಂಗತಿ ಎಂದು ಹೇಳಿದರು.

ಪರಸಪ್ಪ,ಹುಲುಗಪ್ಪ,ಕೃಷ್ಣ,ಕೋಳೂರು ಹುಲಿಗೆಮ್ಮ, ಶಿವಮ್ಮ,ಇವರ ತಂಡದ ಸುಪ್ರಸಿದ್ಧ ಕಲಾವಿದರಿಂದ 5 ದಿನ ಭಜನೆ, ಮಠದಲ್ಲಿ ಪ್ರವಚನ ಹಾಗೂ ಅನ್ನ ಸಂತರ್ಪಣೆ, ಸಾಯಂಕಾಲ ಹೂವಿನ ತೇರು ಎಳೆಯುವ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಂಪ್ರದಾಯಕ ಉಡುಗೆಗಳನ್ನುಟ್ಟು ಕಳಶಗಳನ್ನು ಹೊತ್ತ ನೂರಾರು ಜನ ಮಹಿಳಾ ಮಣಿಗಳು ವಿವಾಹಕ್ಕೆ ಸಾಕ್ಷಿಯಾದರು.

ಈ ಶುಭ ಮದುವೆಗೆ ನಾಂದಿ ಹಾಡಿದ ಡಾ. ಬಿ ಆರ್ ಅಂಬೇಡ್ಕರ್ ನಗರದ ಪ್ರಮುಖ ಯಜಮಾನರಾದ, ಪೂಜಾರಿ ಕೆಂಚಪ್ಪ, ದಲ್ಲಾಳಿ ದುರುಗಪ್ಪ,ದೇವಪ್ರಿಯಾ,ಕೆ ಮಲ್ಲೇಶಪ್ಪ, ಹನುಮಂತಪ್ಪ ಬಾರೆಮರ, ಕಾಡಪ್ಪ, ಮಲ್ಲೇಶಪ್ಪ, ಮಧುಗುಣಿಕೆ ವೆಂಕಟೇಶ್,ಆರ್ ಶೇಖರ್,ಮತ್ತು ವಕೀಲ ಹೆಚ್,ಸೋಮಶೇಖರ್, ಹಾಗೂ ಪಟ್ಟಣ ಪಂಚಾಯತಿ ಸದಸ್ಯರಾದ, ಹೆಚ್ ಗೋಪಾಲಕೃಷ್ಣ, ಸರಿತಾ ವೀರೇಶ್, ಕನ್ನೇಶ್ವರ ದೇವರಮನೆ,ಪಾಲಪ್ಪ, ಇತರ ಸದಸ್ಯರು ಪಾಲ್ಗೊಂಡಿದ್ದರು. ಮುಖಂಡರಾದ ಚಂದ್ರಣ್ಣ, ಎಮ್ ವೆಂಕಟೇಶ್, ಬ್ರಾಂದಿ ಶಾಪ್ ಕೃಷ್ಣ,ಎ ಚಿದಾನಂದ,ಎನ್ ಶಿವರಾಮ,ವೀರಶ್ ಕೊಟ್ಟಾಲು,ಗುತ್ತಿಗೆದಾರ ಮಲ್ಲಿಕಾರ್ಜುನ, ಎನ್ ಶರಣಪ್ಪ, ಕೆಂಪು ವೀರೇಶ,ಹೆಚ್ ಆನಂದ, ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!