ಜಿಲ್ಲೆಯ ಬೆಳೆ ಹಾನಿಯಾದ ರೈತರ ಮಾಹಿತಿ ಪ್ರಕಟ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ಸರ್ಕಾರದ ಆದೇಶದಂತೆ ಕೊಪ್ಪಳ ಜಿಲ್ಲೆಯ ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
2024-25ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 2024ರ ಜೂನ್ 01 ರಿಂದ ಆಗಸ್ಟ್ 31ರವರೆಗೆ ಸುರಿದ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರವನ್ನು ನೀಡುವ ಕುರಿತು ಜಂಟಿ ಸಮೀಕ್ಷೆ ಮಾಡಿ, ಜಿಲ್ಲೆಯಲ್ಲಿ 75.86 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಿರುತ್ತಾರೆ.
ಈ ರೈತರ ಯಾದಿಯನ್ನು ಜಿಲ್ಲಾಧಿಕಾರಿಗಳ, ಉಪವಿಭಾಗಾಧಿಕಾರಿಗಳ, ತಹಶೀಲ್ದಾರ, ಗ್ರಾಮ ಪಂಚಾಯತ್, ರೈತ ಸಂಪರ್ಕ ಕೆಂದ್ರಗಳಲ್ಲಿ ಸೆಪ್ಟೆಂಬರ್ 10ರಂದು ಪ್ರಕಟಿಸಲಾಗಿದ್ದು, ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ತಾಲೂಕು ಕಛೇರಿಗಳಲ್ಲಿ ಏಳು ದಿನದೊಳಗಾಗಿ ಸಲ್ಲಿಸಬೇಕು.
ಕೊಪ್ಪಳ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ರೈತರ ಮಾಹಿತಿಯನ್ನು ವೆಬ್‌ಸೈಟ್ https://koppal.nic.in/en/disaster-management/ ನಲ್ಲಿ ಪರಿಶೀಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
