3

ರಾಜೀರಹಿತ ಒಗ್ಗಟ್ಟಿನ ಹೋರಾಟವೊಂದೇ ದಾರಿ : ಕಾಮ್ರೇಡ್ ಕೆ. ಉಮಾ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 15- ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮ್ಮೇಳನದ ಅಂಗವಾಗಿ ರಾಜ್ಯದ ಮೂಲೆ ಮೂಲೆಗಳಿಂದ ಕಲಬುರಗಿ ನಗರಕ್ಕೆ ಆಗಮಿಸಿದ್ದ ಸಹಸ್ರಾರು ಗುಲಾಬಿ ಯೋಧರಾದ ಆಶಾ ಕಾರ್ಯಕರ್ತೆಯರ ಬೃಹತ್ ಮೆರವಣಿಗೆಯು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಸಾಗಿ, ವೀರಶೈವ ಕಲ್ಯಾಣ ಮಂಟಪದ ಎದುರಿನ ಸಾರ್ವಜನಿಕ ಉದ್ಯಾನವನ ಮೈದಾನದವರೆಗೆ ನಡೆಯಿತು.

ನಂತರ ಸಾರ್ವಜನಿಕ ಉದ್ಯಾನವನ ಮೈದಾನದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಯು.ಸಿ.ಐ(ಸಿ) ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ.ಉಮಾ ರವರು ನೆರೆದ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿ, ಜನತೆಯ ಆರೋಗ್ಯವನ್ನು ಕಾಪಾಡಲು ಕರೋನಾ ಕಾಲದಲ್ಲಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ್ದನ್ನು ಜಗತ್ತೇ ಕೊಂಡಾಡಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸಿದ ಎಲ್ಲಾ ಪಕ್ಷಗಳ ಸರ್ಕಾರಗಳು ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆ-ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಒಂದೆಡೆ 90% ದುಡಿಯುವ ಬಡಜನತೆಯ ಮತ್ತೊಂದೆಡೆ 1% ಬಂಡವಾಳಶಾಹಿಗಳ ಭಾರತವಾಗಿದೆ. ದೇಶದ 77% ಆಸ್ತಿ ಬಂಡವಾಳಶಾಹಿಗಳ ಒಡೆತನದಲ್ಲಿದ್ದರೆ, ಕೇವಲ 22% ಆಸ್ತಿ 90% ಜನತೆಯ ಬಳಿಯಿದೆ. ಬಂಡವಾಳಶಾಹಿಗಳ ಕೃಪಾಕಟಾಕ್ಷದಿಂದ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಅವರ ಲಾಭವನ್ನು ಹೆಚ್ಚಿಸುವ ನೀತಿಗಳನ್ನು ತರುತ್ತಿವೆ. ಅದಕ್ಕಾಗಿ ದುಡಿಯುವ ಜನತೆಯ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಎಲ್ಲಾ ಸರ್ಕಾರಗಳು ಬಂಡವಾಳಶಾಹಿಪರವಾಗಿವೆ. ಆದ್ದರಿಂದ ಆಶಾ ಕಾರ್ಯಕರ್ತೆಯರು ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಸಜ್ಜಾಗಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಮೆಡಿಕಲ್ ಸರ್ವಿಸ್ ಸೆಂಟರ್ ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಸುಧಾ ಕಾಮತ್ ಅವರು ಮಾತನಾಡಿ ಜಾಗತೀಕರಣ, ಖಾಸಗೀಕರಣ ನೀತಿಗಳ ಜಾರಿಯಿಂದ ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದ್ದರ ಪರಿಣಾಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ತೀವ್ರ ಕುಸಿತ ಕಂಡಿದೆ. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಕೇವಲ 2.5% ಹಾಗೂ ರಾಜ್ಯ ಸರ್ಕಾರ ಕೇವಲ 4% ಅನುದಾನ ನೀಡುತ್ತಿವೆ. ದುಡಿಯುವ ಎಲ್ಲರಿಗೂ ಆರ್ಥಿಕ-ಸಾಮಾಜಿಕ ಜೊತೆಗೆ ಬದುಕಿನ ಭದ್ರತೆ ಒದಗಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ ಭಾಷಣಕಾರರಾಗಿ ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕಾಮ್ರೇಡ್. ಕೆ.ಸೋಮಶೇಖರ್, ಸಂಘದ ರಾಜ್ಯ ಅಧ್ಯಕ್ಷ ಶ್ರೀ.ಕೆ.ಸೋಮಶೇಖರ್ ಯಾದಗಿರಿ, ಸಂಘದ ರಾಜ್ಯ ಉಪಾಧ್ಯಕ್ಷೆ ಕಾ.ರಮಾ ಟಿ.ಸಿ ಮಾತನಾಡಿದರು. ಸಂಘದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಡಿ ನಾಗಲಕ್ಷ್ಮಿ ಅವರು ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತ, ರಾಜ್ಯದ 31 ಜಿಲ್ಲೆಗಳಲ್ಲಿ ವಿವಿಧ ತಾಲೂಕು ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗಿಯಾದ ಆಶಾ ಕಾರ್ಯಕರ್ತೆರಿಗೆ ಅಭಿನಂದಿಸಿದರು. ವೇದಿಕೆಯ ಮೇಲೆ ಎಐಎಂಎಸ್‌ಎಸ್ ಮಹಿಳಾ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಶೋಭಾ ಎಸ್ ಹಾಗೂ ಸಂಘದ ರಾಜ್ಯ ಸಮಿತಿಯ ಇತರೆ ಸದಸ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನಾ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಆಶಾ ಕಾರ್ಯಕರ್ತೆರು ಶಿಸ್ತಿನಿಂದ ಮೆರವಣಿಗೆಯಲ್ಲಿ ಸಾಗುತ್ತಾ-‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ 15ಸಾವಿರ ನಿಗದಿ ಮಾಡಿ, ಆಶಾಗಳನ್ನು ಕಾರ್ಮಿಕರೆಂದು ಪರಿಗಣಿಸಿ, ಸರ್ಕಾರದ ಒಣ ಮಾತು ಸಾಕು-ಸ್ಪಂದನೆ ಬೇಕು, ರಾಜೀರಹಿತ ಒಗ್ಗಟ್ಟಿನ ಹೋರಾಟ ಚಿರಾಯುವಾಗಲಿ’- ಇತ್ಯಾದಿ ಘೋಷಣೆಗಳು ಕಲಬುರ್ಗಿಯ ಜನತೆಯ ಮನ ಸೆಳೆದವು.

ಇದಾದನಂತರ ಸಂಜೆಯಿಂದ ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ 2 ದಿನಗಳ ಪ್ರತಿನಿಧಿ ಅಧಿವೇಶನ ಪ್ರಾರಂಭವಾಯಿತು.

Leave a Reply

Your email address will not be published. Required fields are marked *

error: Content is protected !!