ಕಿತ್ತೂರು ರಾಣಿ ಚೆನ್ನಮ್ಮ
ಹೋರಾಟದ ಮೂಲಕ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 02- ದೇಶದ ಸ್ವಾತಂತ್ರ್ಯ ಕ್ಕೆ ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂತ ವೀರ ನಾರಿಯರು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದರು ಮತ್ತು ಕಿತ್ತೂರು ರಾಣಿ ಚೆನ್ನಮ್ಮ ತಮ್ಮ ಹೋರಾಟದ ಮೂಲಕ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಗುರುವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಜತೆಗೆ ಅಕ್ಕಮಹಾದೇವಿ, ಜಿ.ಎಸ್ ಶಿವರುದ್ರಪ್ಪ, ಚನ್ನವೀರ ಕಣವಿ ಅನೇಕ ಮಹನೀಯರು ನಮಗೆ ಮಾದರಿ. ಹಾಗೂ ತತ್ವ ಸಿದ್ಧಾಂತಗಳಡಿ ಬದುಕೋಣ ಎಂದರು.
ದೇಶ ಹಾಗೂ ಜಗತ್ತಿಗೆ ಅನ್ನ ನೀಡುವ ಕಾಯಕದಲ್ಲಿ ಪಂಚಮಸಾಲಿ ಸಮಾಜದ ಸಿಂಹಪಾಲು ಇದೆ. ಆದರೆ ಇನ್ನೂ ಸಮಾಜಕ್ಕೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. 2ಎ ಮೀಸಲಾತಿಗಾಗಿ ಇಬ್ಬರು ಜಗದ್ಗುರುಗಳ ಸಾನಿಧ್ಯದಲ್ಲಿ ಸಮಾಜವು ಅನೇಕ ಹೋರಾಟ ಮಾಡುತ್ತಾ ಬಂದಿದೆ. ಕಳೆದ ಬೊಮ್ಮಾಯಿ ಸರಕಾರ ಮೀಸಲಾತಿ ನೀಡಲಿ ತೀರ್ಮಾನಿಸಿತ್ತು. ಆದರೆ ಅದು ವಿಳಂಬವಾಯಿತು. ಈಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಸಚಿವ ಶಿವಾನಂದ ಪಾಟೀಲ್, ಶಾಸಕರಾದ ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್ ನೇತೃತ್ವವಹಿಸಿಕೊಂಡು ಸಿಎಂಗೆ ಭೇಟಿಯಾಗಲಿ. ವಿರೋಧ ಪಕ್ಷದಲ್ಲಿರುವ ಸಮಾಜದ ಶಾಸಕರು, ರಾಜಕೀಯ ನಾಯಕರು ಕೈ ಜೋಡಿಸುತ್ತೇವೆ ಎಂದು ಹೇಳಿದರು.
ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೊರಾಡಿದ ದಿಟ್ಟ ಹೋರಾಟಗಾರ್ತಿ. ದೇಶದಲ್ಲಿ ಸ್ವಾತಂತ್ರ್ಯ ಕಿಚ್ಚನ್ನು ಹೊತ್ತಿಸಿದ ವೀರ ಮಹಿಳೆ. ಹೆಣ್ಣಿಗೆ ಇಡೀ ಜಗತ್ತನ್ನೇ ಆಳುವ ಶಕ್ತಿ ಇದೆ. ರಾಣಿ ಕಿತ್ತೂರು ಚೆನ್ನಮ್ಮನವರ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅವರ ಹಾದಿಯಲ್ಲೇ ಸಾಗಬೇಕು ಎಂದರು.
ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಶರಣಬಸಪ್ಪ ಬಿಳಿಯೆಲೆ, ಬ್ರಿಟೀಷರಿಗೆ ಸೋಲಿನ ರುಚಿ ತೋರಿಸಿದ ವೀರ ಮಹಿಳೆ, ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಕಿತ್ತೂರು ಚೆನ್ನಮ್ಮ. ಕಿತ್ತೂರಿನ ದೇಶಾಭಿಮಾನ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ಈಗಲೂ ಕಾಡುತ್ತದೆ. ತಮ್ಮ ಧೂತರಿಂದ ‘ಕಪ್ಪ ಕಾಣಿಕೆ ನೀಡುವುದರ ಜತೆಗೆ ಸಾಮ್ರಾಜ್ಯ ಒಪ್ಪಿಸಿ ಸಾಮಾನ್ಯರಂತೆ ಬದುಕಲು ಸಂದೇಶ ಹೊರಡಿಸಿದ ಥ್ಯಾಕರೆಗೆ ‘ನಾನೇಕೆ ಕೊಡಬೇಕು ಕಪ್ಪ’ ಎಂದು ಪ್ರಶ್ನಿಸಿದ್ದರು. ಯುದ್ಧ ನೈಪುಣ್ಯ, ಔದಾರ್ಯ, ಚಾಣಾಕ್ಷತೆ ಹೊಂದಿದ್ದ ಚೆನ್ನಮ್ಮ ಎಲ್ಲಾ ಸಮುದಾಯದ ನಾಯಕಿ, ಕನ್ನಡಿಗರ ಸ್ವಾಭಿಮಾನದ ಪ್ರತೀಕ. ಅವರ ಹೋರಾಟ ನಿರರ್ಥಕವಾಗಿಲ್ಲವೆಂದು ಉಪನ್ಯಾಸ ನೀಡಿದರು.
ಎಂ.ಎಲ್ಸಿ ಹೇಮಲತಾ ನಾಯಕ್, ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿದರು. ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಮೆರವಣಿಗೆ : ಪೂರ್ಣಕುಂಭ, ವಿವಿಧ ವಾದ್ಯಗಳೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರವನ್ನು, ನಗರದ ಚೆನ್ನಮ್ಮ ಸರ್ಕಲ್ ನಿಂದ, ಅಂಬೇಡ್ಕರ್ ಸರ್ಕಲ್, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ಸರ್ಕಲ್ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ರಾಣಿ ಚೆನ್ನಮ್ಮನವರ ಛದ್ಮವೇಷ ಧರಿಸಿದ್ದ ಬಾಲಕಿಯರು ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ ಗವಿಸಿದ್ದಪ್ಪ, ಸಮುದಾಯದ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ, ಮಹಿಳಾ ಜಿಲ್ಲಾಧ್ಯಕ್ಷೆ ಸುಮಂಗಲಾ ಹಂಚಿನಾಳ, ತಾಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ತಾಲೂಕು ಮಹಿಳಾಧ್ಯಕ್ಷೆ ಸುಜಾತ, ಕಳಕನಗೌಡ, ಗವಿಸಿದ್ದಪ್ಪ ಚಿನ್ನೂರು, ನಿಂಗಮ್ಮ ಸಂಗಣ್ಣ ಕರಡಿ, ಲತಾ ಗವಿಸಿದ್ದಪ್ಪ ಚಿನ್ನೂರು ಸೇರಿದಂತೆ ಸಮುದಾಯದ ಹಿರಿಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.
—–

