ಎಐಡಿವೈಓ ಯುವಜನ ಸಂಘಟನೆಯಿಂದ ಅಖಿಲ ಭಾರತ ಪ್ರತಿಭಟನಾ ದಿನ ಆಚರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೧೨- ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಎ.ಪಂಪಾಪತಿ ಕೋಳೂರು ಅವರು ಮಾತನಾಡಿ ಭಾರತವನ್ನ ಯುವರಾಷ್ಟ್ರ ಎಂದು ಎಲ್ಲಾ ರಾಜಕೀಯ ಪಕ್ಷಗಳು ಭಾಷಣ ಮಾಡುತ್ತಾರೆ, ಆದರೆ ಯುವಕರ ಮುಖ್ಯ ಸಮಸ್ಯೆಯಾದ ನಿರುದ್ಯೋಗದ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಉದ್ಯೋಗ ಕೊಡಬೇಕಾದ ಸರ್ಕಾರಗಳೇ ಉದ್ಯೋಗ ಕಡಿತಮಾಡಿ ಯುವಕರನ್ನು ನಿರುದ್ಯೋಗದ ಸುಳಿಗೆ ಸಿಲುಕಿಸುತ್ತಿವೆ.
ಯುವಕರಿಗಾಗಿ ಒಂದು ಸರಿಯಾದ ಯುವನೀತಿಯನ್ನು ರೂಪಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿವೆ. ಸುಮಾರು ೧೦ ಲಕ್ಷಕ್ಕೂ ಹೆಚ್ಚು ಹುದ್ದೆಗಳು ರೈಲ್ವೆ ಇಲಾಖೆಯಲ್ಲಿ ಖಾಲಿ ಇವೆ. ಅವನ್ನು ತುಂಬಿಸಿಕೊಳ್ಳುವುದನ್ನು ಬಿಟ್ಟು ಇರುವ ಹುದ್ದೆಗಳನ್ನು ನಾಶಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡುತ್ತಿವೆ. ಕಳೆದ ವರ್ಷ ಸುಮಾರು ೯೦ ಸಾವಿರ ಹುದ್ದೆಗಳನ್ನು ನಾಶ ಮಾಡುವಮೂಲಕ ಕೇಂದ್ರ ಸರ್ಕಾರ ಯುವಕರಿಗೆ ದ್ರೋಹ ಬಗೆದಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ, ಇಂದು ಯುವಜನರು ಉದ್ಯೋಗಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ನಮ್ಮ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿ ಯುವಕರನ್ನು ಹತಾಶರನ್ನಾಗಿಸುತ್ತಿವೆ. ಹಗರಣ ಗಳ ಮೇಲೆ ಹಗರಣಗಳನ್ನು ಮಾಡುತ್ತಿವೆ ಮತ್ತು ಅವು ಯಾವುದೇ ರೀತಿಯಾಗಿ ತನಿಖೆಗಳು ಆಗದೇ ನೆನೆಗುದಿಗೆ ಬಿದ್ದಿವೆ. ಎಷ್ಟೋ ಜನ ಯುವಕರು ಉದ್ಯೋಗಕ್ಕಾಗಿ ಅಲೆದು ಅಲೆದು ಹತಾಶರಾಗಿ ಆತ್ಮಹತ್ಯೆ ಮತ್ತು ಸಮಾಜಘಾತುಕ ಗಳಂತಹ ಕೆಟ್ಟ ದಾರಿ ಹಿಡಿಯುತ್ತಿದ್ದಾರೆ. ಈ ಹಿಂದೆ ಬಾಲಸೋರ್ ನಲ್ಲಿ ನಡೆದ ರೈಲು ಅಪಘಾತ ಈ ಶತಮಾನದಲ್ಲೇ ಅತಿ ದೊಡ್ಡ ಅಪಘಾತ ಎಂದು ಹೇಳಲಾಗುತ್ತಿದೆ. ಏಕೆಂದರೆ ಅಲ್ಲಿ ರೈಲ್ವೆ ನಿರ್ವಹಣೆಗೆ ಬೇಕಾದಷ್ಟು ಉದ್ಯೋಗ ಭರ್ತಿ ಇಲ್ಲದಿರುವುದು ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಇಷ್ಟಾದರೂ ಕೇಂದ್ರಸರ್ಕಾರ ಉದ್ಯೋಗಗಳನ್ನು ಭರ್ತಿ ಮಾಡುವುದುನ್ನು ಬಿಟ್ಟು ಖಾಸಗೀಕರಣದ ಹೆಸರಿನಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ. ಇದರ ವಿರುದ್ಧ ದೇಶದ ಯುವಕರು ಒಂದಾಗಿ ಹೋರಾಡಬೇಕಿದೆ ಎಂದರು.
ಬೇಡಿಕೆಗಳಾದ -ರೈಲ್ವೆ ಖಾಸಗೀಕರಣ ವಿರೋಧಿಸಿ, ರೈಲ್ವೆ ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿ, ಕಾಯ್ದಿರಿಸಿದ (Uಖ) ಕೋಚ್ ಮತ್ತು ಸ್ಲೀಪರ್ (Sಐ) ಗಳನ್ನು ಹೆಚ್ಚಿಸಿ, ಹಿರಿಯನಾಗರೀಕರಿಗೆ ರಿಯಾಯಿತಿ ಮರುಸ್ಥಾಪಿಸಿ; ವಲಸೆ ಕಾರ್ಮಿಕರಿಗೆ ಸಂಪೂರ್ಣ ಕಾಯ್ದಿರಿಸಿದ (Uಖ ) ಕೋಚ್ ಗಳ ರೈಲುಗಳನ್ನು ಓಡಿಸಿ. ಎಂಬ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿ ಕೇಂದ್ರ ರೈಲ್ವೆ ಸಚಿವರಿಗೆ ಬಳ್ಳಾರಿ ಸ್ಟೇಷನ್ ಮಾಸ್ಟರ್ ಮೂಲಕ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ವೀರಮಲ್ಲ, ನಿತಿನ್, ನಾಗರಾಜ್, ಆಕಾಶ್, ದರ್ಶನ್ ಮತ್ತು ಇನ್ನಿತರ ವಿದ್ಯಾರ್ಥಿ ಯುವಜನರು ಭಾಗವಹಿಸಿದ್ದರು.
