KB

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 16- ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಕೊಪ್ಪಳ ಜಿಲ್ಲಾ ಮಟ್ಟದ ಸಮಿತಿಯನ್ನು ಪುನರ್ ರಚನೆ ಮಾಡಿ ಜಿಲ್ಲಾಧಿಕಾರಿ ನಲಿನ್ ಅತುಲ್ ಆದೇಶಿಸಿದ್ದಾರೆ.

ಸರ್ಕಾರ ಆದೇಶದಂತೆ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಮಹಿಳಾ ಅಧಿಕಾರಿಗಳು ಅಧ್ಯಕ್ಷರಿರುವ ಸಮಿತಿ ರಚಿಸುವುದು ಅವಶ್ಯವಿದ್ದು, ಜಿಲ್ಲಾ ಮಟ್ಟದ ಸ್ಥಳೀಯ ಸಮಿತಿಯನ್ನು ಈಗಾಗಲೇ ರಚಿಸಲಾಗಿರುತ್ತದೆ. ಸಮಿತಿಯಲ್ಲಿ ನೇಮಿಸಲಾದ ಕೆಲ ಅಧಿಕಾರಿಗಳು, ಸಿಬ್ಬಂದಿಗಳು ವರ್ಗಾವಣೆ ಮತ್ತು ಪದೋನ್ನತಿ ಹೊಂದಿ ಬೇರೆಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಮಿತಿಯನ್ನು ಪುನರ್ ರಚಿಸುವುದು ಅವಶ್ಯಕವಾಗಿರುವುದರಿಂದ ಕೊಪ್ಪಳ ಜಿಲ್ಲಾ ಮಟ್ಟದ ಸ್ಥಳೀಯ ಸಮಿತಿಯನ್ನು ಪರಿಷ್ಕರಿಸಲಾಗಿದೆ.

ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆನ ಲೈಂಗಿಕ ಕಿರುಕುಳ ತಡೆಗೆ ಕೊಪ್ಪಳ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರಾದ ಭಾರತಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಸದಸ್ಯರುಗಳಾಗಿ ಹಿಟ್ನಾಳ ಹೋಬಳಿಯ ಉಪ ತಹಶೀಲ್ದಾರಾರದ ರೇಖಾ ದಿಕ್ಷಿತ, ಯಲಬುರ್ಗಾ ಸಾಂತ್ವನ ಕೇಂದ್ರದ ಮುಖ್ಯಸ್ಥರಾದ ಸರೋಜ ಬಾಕಳೆ, ಕೊಪ್ಪಳ ಇನ್ನರವೀಲ್ ಕ್ಲಬ್‌ನ ತ್ರಿಶಲಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೆಷನ್ ಅಧಿಕಾರಿಗಳಾದ ಶಿವಲೀಲಾ ವನ್ನೂರು, ಕೊಪ್ಪಳ ಯುನಿಸೆಫ್ ಕಾರ್ಯಕ್ರಮ ವ್ಯವಸ್ಥಾಪಕರಾದ ಹರೀಶ್ ಜೋಗಿ ಹಾಗೂ ಜಿಲ್ಲೆಯ ೭ ತಾಲ್ಲೂಕಿನ ತಹಶೀಲ್ದಾರರನ್ನು ಮತ್ತು ಸದಸ್ಯ ಕಾರ್ಯದರ್ಶಿಗಳಾಗಿ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರನ್ನು ನೇಮಕ ಮಾಡಿದೆ.

ಸಮಿತಿಯ ಕರ್ತವ್ಯ ಮತ್ತು ಜವಾಬ್ದಾರಿಗಳು : ನೇರವಾಗಿ ಸಮಿತಿಗೆ ಬರುವ ಅಹವಾಲು/ದೂರು ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ಬಂದ ದೂರುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು. ಪ್ರತಿವಾರ ದೂರು ಪೆಟ್ಟಿಗೆಯನ್ನು ತೆರೆದು ಅದರಲ್ಲಿರುವ ದೂರುಗಳ ಬಗ್ಗೆ ವಿಚಾರಣೆ ವರದಿಯನ್ನು ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಬೇಕು. ದೂರು ಪೆಟ್ಟಿಗೆಯಲ್ಲಿ ಯಾವುದೇ ದೂರುಗಳು ಇಲ್ಲದಿದ್ದರೆ, ಪ್ರತಿ ೧೫ ದಿನಗಳಿಗೊಮ್ಮೆ ಸಭೆ ನಡೆಸಿ ವರದಿ ಸಲ್ಲಿಸಬೇಕು. ಎಲ್ಲಾ ಕಚೇರಿಗಳಲ್ಲಿ ದೂರು ಪೆಟ್ಟಿಗೆ ಸ್ಥಾಪಿಸುವಂತೆ ಕ್ರಮವಹಿಸುವುದು ಮತ್ತು ದೂರು ಪೆಟ್ಟಿಗೆ ರಚನೆಯಾದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು.

ಸಮಿತಿಗೆ ಸಂಬ0ಧಿಸಿದ ಸಭೆಗಳ ಆಯೋಜನೆ, ಪತ್ರವ್ಯವಹಾರ, ನೋಟಿಸ್‌ಗಳ ಸಿದ್ಧತೆ ಮತ್ತು ತಲುಪಿಸುವಿಕೆ ಮತ್ತು ಸಮಿತಿಯ ಸಭೆಗಳ ನಡಾವಳಿಗಳನ್ನು ಹಾಗೂ ಸಮಿತಿಯ ಪ್ರಗತಿಯ ಮಾಹಿತಿಯ ಸಂಪೂರ್ಣ ದಾಖಲಾತಿಗಳನ್ನು ಸದಸ್ಯ ಕಾರ್ಯದರ್ಶಿಗಳು ನಿರ್ವಹಿಸಬೇಕು. ಸಮಿತಿಯ ಸಭೆಗಳು ಹಾಗೂ ದೂರು/ಅಹವಾಲು ವಿಚಾರಣೆಗಳು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇಲ್ಲಿ ಅಥವಾ ಸಮಿತಿಯ ಅಧ್ಯಕ್ಷರು ಸೂಚಿಸಿ ತೀರ್ಮಾನಿಸುವ ಸ್ಥಳದಲ್ಲಿ ಆಯೋಜಿಸಬೇಕು. ಕಾಲಕಾಲಕ್ಕೆ ಬದಲಾವಣೆಯಾಗುವ ಆದೇಶಗಳಿಗೆ ಅನುಗುಣವಾಗಿ ಮತ್ತು ನಿಯಮಾನುಸಾರ ಸಮಿತಿ ಕಾರ್ಯನಿರ್ವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!