ಉದ್ದೇಶಿತ ಕಸಾಯಿಖಾನೆ (ವಧಾಗೃಹ) ನಿರ್ಮಾಣಕ್ಕೆ ಆಕ್ಷೇಪ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 12- ನಗರಸಭೆ ವ್ಯಾಪ್ತಿಯ ಹಿರೇಜಂತಕಲ್‌ನ ಸರ್ವೆ ನಂ: ೩೬೩/೨ರ ಜಾಗೆಯನ್ನು ಒಳಚರಂಡಿ ತ್ಯಾಜ್ಯ ಸಂಗ್ರಹ ಉದ್ದೇಶಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸರ್ಕಾರದ ನಿಯಮಾವಳಿಗಳ ಪ್ರಕಾರ ನಗರ ವ್ಯಾಪ್ತಿಯಿಂದ ಸುಮಾರು ೫ ಕಿ.ಮೀ ಅಂತರದಲ್ಲಿ ಯಾವುದೇ ಕಸಾಯಿಖಾನೆ (ವಧಾಗೃಹ) ನಿರ್ಮಿಸಲು ಅವಕಾಶವಿರುವುದಿಲ್ಲ.
ಈಗ ಸದರಿ ಜಾಗೆಯನ್ನು ಕಸಾಯಿಖಾನೆಗೆ ನೀಡಲು ಮರುಟೆಂಡರ್ ಕರೆದಿರುವುದು ತೀವ್ರ ಆಕ್ಷೇಪಾರ್ಹವಾಗಿದೆ ಎಂದು ಬಿಜೆಪಿ ನಗರ ಯುವಮೋರ್ಚ ಅಧ್ಯಕ್ಷ ಕೆ.ವೆಂಕಟೇಶ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸದರಿ ಕಸಾಯಿ ಖಾನೆ ನಿರ್ಮಾಣದ ಟೆಂಡರ್‌ನ್ನು ಹಿಂಪಡೆಯಲು ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಹಿರೇಜಂತಕಲ್ ಪ್ರದೇಶವು ತನ್ನದೇ ಆದ ಐತಿಹಾಸಿಕ ಇತಿಹಾಸ ಹೊಂದಿದ್ದು ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆಗಳು ನಿರ್ಮಿಸಿದ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಸ್ಥಾನ, ಶಂಖ ಚಕ್ರ ಆಂಜನೇಯ ದೇವಾಲಯ, ಮುಡ್ಡಾಣೇಶ್ವರ ದೇವಸ್ಥಾನ ಹೀಗೆ ಇದು ಹಲವಾರು ದೇವಸ್ಥಾನಗಳು ಹಾಗೂ ಪುಣ್ಯ ಕ್ಷೇತ್ರಗಳಿರುವ ತಾಣವಾಗಿದ್ದು, ವಿಜಯನಗರ ಮುಖ್ಯ ಕಾಲುವೆ ಈ ಭಾಗದಲ್ಲಿ ಹರಿಯುತ್ತಿದ್ದು ಸುಮಾರು ೭೦೦ ಎಕರೆ ಪ್ರದೇಶದಲ್ಲಿ ಕಬ್ಬು, ಬಾಳೆ, ಭತ್ತ ಮತ್ತು ಇನ್ನಿತರ ಬೆಳೆ ವ್ಯವಸಾಯ ಮಾಡಲಾಗುತ್ತಿದೆ. ಆದರೆ ಇಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಮರುಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು ಸದರಿ ಪ್ರಕ್ರಿಯೆಯನ್ನು ರದ್ದುಪಡಿಸಿ, ಸದರಿ ಮರುಟೆಂಡರ್ ನಿರ್ಣಯವನ್ನು ಕೈಬಿಡಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದರು.
ಬಿಜೆಪಿ ಯುವಮೋರ್ಚಾವತಿಯಿಂದ ಮುಂದಿನ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ತಿಳಿಸುತ್ತಾ, ಈ ಹಿಂದೆ ಇದೇ ವಿಚಾರವಾಗಿ ೨೦೨೦ರ ಫೆಬ್ರವರಿ-೧೯ ರಂದು ಗಂಗಾವತಿ ಬಂದ್ ಕರೆದ ಹಾಗೆ, ಮುಂದಿನ ದಿನಗಳಲ್ಲಿ ಗಂಗಾವತಿ ಬಂದ್‌ಗೆ ಕರೆ ನೀಡುತ್ತೇವೆ ಎಂದರು.
