10 ರಂದು ಆತ್ಮಹತ್ಯೆ ತಡೆ ದಿನಾಚರಣೆ ಜನಜಾಗೃತಿ ಜಾಥಾ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೭- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಇಲಾಖೆ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ” ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೦ರಂದು ಬೆಳಿಗ್ಗೆ ೮.೫೦ಕ್ಕೆ ನಗರದ ಹಳೇ ಜಿಲ್ಲಾ ಆಸ್ಪತ್ರೆ ಆವರಣದಿಂದ ಹಮ್ಮಿಕೊಳ್ಳಲಾಗಿದೆ.
ಅಲ್ಲಿಂದ ಜಾಥವು ಅಶೋಕ ವೃತ್ತ, ತಾಲೂಕು ಪಂಚಾಯತ್, ದಿವಟರ್ ಸರ್ಕಲ್ ಮೂಲಕ ಹಳೇ ಜಿಲ್ಲಾ ಆಸ್ಪತ್ರೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಅರ್ಜಿ : ಅವಧಿ ವಿಸ್ತರಣೆ ಕೊಪ್ಪಳ, ೭- ೨೦೨೪-೨೫ನೇ ಸಾಲಿನ ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಬೆಳೆ ಸ್ಪರ್ಧೆಗೆ ಆಸಕ್ತ ರೈತ ಹಾಗೂ ರೈತ ಮಹಿಳೆಯರಿಂದ ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ ೧೦ರವರೆಗೆ ವಿಸ್ತರಿಸಲಾಗಿದೆ.
ಕೃಷಿ ಪ್ರಶಸ್ತಿ ಮಾರ್ಗಸೂಚಿಯ ಮಾನದಂಡಗಳ ಪ್ರಕಾರ ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಅರ್ಹರಾಗಲು ಪುರುಷರ ವಿಭಾಗದಲ್ಲಿ ಕನಿಷ್ಟ ೧೫ ಮತ್ತು ಮಹಿಳೆಯರ ವಿಭಾಗದಲ್ಲಿ ಕನಿಷ್ಟ ೦೭ ಅರ್ಜಿಗಳ ನೋಂದಣಿ ಕಡ್ಡಾಯವಾಗಿರುತ್ತದೆ. ಆದ್ದರಿಂದ ಜಿಲ್ಲೆಯ ೦೭ ತಾಲ್ಲೂಕುಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ನೋಂದಾಯಿಸಿಕೊಳ್ಳುವ ಸಲುವಾಗಿ ೨೦೨೪-೨೫ ನೇ ಸಾಲಿನ ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ನಿಗದಿ ಪಡಿಸಲಾಗಿದ್ದ ಅಂತಿಮ ದಿನಾಂಕವನ್ನು ವಿಸ್ತರಿಸಿ ಸೆಪ್ಟೆಂಬರ್ ೧೦ಕ್ಕೆ ಮರುನಿಗದಿಪಡಿಸಲಾಗಿರುತ್ತದೆ.
ಈ ಅವಕಾಶವನ್ನು ಜಿಲ್ಲೆಯ ಎಲ್ಲಾ ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
