26, 27 ರಂದು ಎಐಯುಟಿಯುಸಿಯ ೪ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21- ಕೇಂದ್ರ ಕಾರ್ಮಿಕ ಸಂಘಟನೆಯಾದ ಎಐಯುಟಿಯುಸಿ ಯ ನಾಲ್ಕನೇ ರಾಜ್ಯ ಸಮ್ಮೇಳನದ ಪ್ರಚಾರಂದೋಲನ ಮತ್ತು ಪೋಸ್ಟರ್ ಬಿಡುಗಡೆಗಡೆಯನ್ನು ಸಂಘದ ಕಛೇರಿಯಲ್ಲಿ ಹಾಗೂ ಗಿಣಿಗೇರ ಇನ್ನಿತರ ಹಳ್ಳಿಗಳಲ್ಲಿ ಕಾರ್ಮಿಕರ ಮಧ್ಯ ಪ್ರಚಾರಂದೋಲನ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಮ್ಮೇಳನನ ಕುರಿತು ಕಾರ್ಮಿಕ ಮುಖಂಡ ಶರಣು ಗಡ್ಡಿ ಮಾತನಾಡುತ್ತ ಆಳುವ ಬಂಡವಾಳ ಶಾಹಿ ವರ್ಗದ ಕ್ರೂರ ಶೋಷಣೆ ವಿರುದ್ಧ ಕಾರ್ಮಿಕ ಚಳುವಳಿಯನ್ನು ಬಲಪಡಿಸಲು “ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳು ವಿರುದ್ಧ ಹೋರಾಟವನ್ನು ರೂಪಿಸಲು. ಎಐಯುಟಿಯುಸಿ ನಾಲ್ಕನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನವನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ವರ್ಗದ ಕಾರ್ಮಿಕರು ಭಾಗವಹಿಸಬೇಕು.
ಕೇಂದ್ರದಲ್ಲಿ ದೀರ್ಘ ಕಾಲ ಆಳಿದ ಕಾಂಗ್ರೆಸ್ ಹಾಗೂ ಪ್ರಸಕ್ತ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳು ದೇಶದ ಸಂಪತ್ತು ಹಾಗೂ ಕಾರ್ಮಿಕರ ಶ್ರಮಶಕ್ತಿಯನ್ನು ಲೂಟಿ ಮಾಡಲು ಅನುವು ಮಾಡಿಕೊಟ್ಟಿವೆ. ಜನರ ತೆರಿಗೆ ಹಣ ಹಾಗೂ ಕಾರ್ಮಿಕರ ಶ್ರಮದಿಂದ ಕಟ್ಟಿದ ರೈಲ್ವೇ, ಬ್ಯಾಂಕು-ವಿಮೆ, ಉಕ್ಕು, ಕಲ್ಲಿದ್ದಲು, ವಿದ್ಯುತ್ ಉತ್ಪಾದನೆ ಇತ್ಯಾದಿ ಸಾರ್ವಜನಿಕ ಉದ್ದಿಮೆಗಳನ್ನು ಅಂಬಾನಿ, ಅದಾನಿ, ಟಾಟಾ, ಬಿರ್ಲ್ಲಾರಂತಹ ಕಾರ್ಪೋರೇಟ್ ಮನೆತನಗಳಿಗೆ ಧಾರೆಯೆರೆಯಲಾಗುತ್ತಿದೆ. ಅಪಾರ ತ್ಯಾಗ ಬಲಿದಾನಗಳಿಂದ ಗಳಿಸಿದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರವು ಕಾರ್ಮಿಕ ಕಾಯ್ದೆಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಿ ೪ ಲೇಬರ್ ಕೋಡ್ (ಕಾರ್ಮಿಕ ಸಂಹಿತೆ)ಗಳನ್ನು ರೂಪಿಸಿದೆ. ಒಟ್ಟಾರೆಯಾಗಿ ಎಲ್ಲ ಸರ್ಕಾರಗಳು ಕಾರ್ಮಿಕರ ಹಿತವನ್ನು ಬಲಿಕೊಟ್ಟು ಬಂಡವಾಳಶಾಹಿಗಳ ಲಾಭವನ್ನು ನೂರಾರು ಪಟ್ಟು ಹೆಚ್ಚಿಸುವ ನೀತಿಗಳನ್ನು ಅನುಸರಿಸುತ್ತಿವೆ.
ಇಂತಹ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಾಜ್ಯದಲ್ಲಿ ಕಾರ್ಮಿಕ ಚಳುವಳಿಯನ್ನು ಎಐಯುಟಿಯುಸಿ ಕಟ್ಟುತ್ತಿದೆ. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾರ್ಮಿಕರ, ಕೈಗಾರಿಕಾ ಕಾರ್ಮಿಕರ, ಕಟ್ಟಡ, ಗಿಗ್ ಪ್ಲಾಟ್ಫಾರ್ಮ್ ಇತ್ಯಾದಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಯಶಸ್ವಿ ಹೋರಾಟಗಳನ್ನು ಬೆಳೆಸುತ್ತಿದೆ. ಈ ದಿಸೆಯಲ್ಲಿ ಇದೀಗ ಅಕ್ಟೋಬರ್ ೨೬, ೨೭ ರಂದು ನಮ್ಮ ನೆಚ್ಚಿನ ಸಂಘಟನೆ ಎಐಯುಟಿಯುಸಿ ತನ್ನ ೪ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದೆ.
ಆಳುವ ವರ್ಗದ ನಿರಂತರ ದಾಳಿಯಿಂದ ದುಡಿಯುವ ಜನರ ಬದುಕು ಸಂಕಟಮಯವಾಗಿರುವ ಸಂದರ್ಭದಲ್ಲಿ ಈ ಸಮ್ಮೇಳನವು ಜರುಗುತ್ತಿದೆ. ದುಡಿಯುವ ಜನರ ಚಳುವಳಿಯನ್ನು ತೀವ್ರಗೊಳಿಸಲು, ವೈಚಾರಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಂಘಟನಾತ್ಮಕವಾಗಿ ಕಾರ್ಮಿಕ ವರ್ಗವನ್ನು ಸಶಕ್ತಗೊಳಿಸಲು ಈ ಸಮ್ಮೇಳನ ಅಗತ್ಯವಾಗಿದೆ. ಆದ್ದರಿಂದ ರಾಜ್ಯದ ಸಮಸ್ತ ದುಡಿಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡ ಮಂಗಳೇಶ್ ರಾಥೋಡ್, ಸುರೇಶ್ ಗಡ್ಡಿ, ಸುರೇಶ್ ಕಲಾಲ್, ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡ ಗೌಡರ್ ಶೋಭಾ ಹೂಗಾರ್, ಶಂಕ್ರಮ್ಮ ಹಳ್ಳಿಕೇರಿ, ಅನ್ನಪೂರ್ಣ, ಶಿವಮ್ಮ, ಚಂಪಾ, ಲಕ್ಷ್ಮಿ ಕಂಪ್ಲಿ ಕರ್, ನಿರ್ಮಲ ಇರ್ಕಲ್ಗಡ, ಸುನಿತಾ ಆಚಾರ್, ಸರೋಜಾ, ರಜಿಯಾಬೇಗಂ ಕವಲೂರು, ಯಮನೂರಪ್ಪ ಕಟಗಿ, ಗಣೇಶ್ ಗಿಣಿಗೇರ, ಮುಂತಾದವರು ಭಾಗವಹಿಸಿದ್ದರು.
