ವಾಸವಿ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಲಿ : ಸಿಎಂಗೆ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26- ಆರ್ಯವೈಶ್ಯ ಕುಲದೇವತೆ ಶ್ರೀವಾಸವಿ ಕನ್ಯಕಾಪರಮೇಶ್ವರಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆರ್ಯ ವೈಶ್ಯ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಗುಪ್ತಾ ನೇತೃತ್ವದಲ್ಲಿ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.
ಶ್ರೀವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಪ್ರತಿವರ್ಷ ಪ್ರತಿವರ್ಷ ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ದಶಮಿಯ ದಿನದಂದು ಆಚರಿಸುತ್ತಿದ್ದೇವೆ. ಶ್ರೀವಾಸವಿ ಮಾತೆಯು ತ್ಯಾಗ ಮತ್ತು ಪವಿತ್ರತೆಯ ಸಾರವನ್ನು ಜಗತ್ತಿಗೆ ತಿಳಿಸಲು ಭೂಲೋಕದಲ್ಲಿ ಅವತರಿಸಿದ್ದಾಳೆ. ಶ್ರೀವಾಸವಿ ಮಾತೆಯ ಜನ್ಮವು ಕೂಡ ಪುತ್ರಕಾಮೇಷ್ಟಿ ಯಾಗದಲ್ಲಿಯ ಪವಿತ್ರವಾದ ಅಗ್ನಿಂಬAದ ಆಗಿದೆ. ಶ್ರೀವಾಸವಿ ಮಾತೆಯು ಜನ್ಮ ತಾಳಿದ ಉದ್ದೇಶ ಸರ್ವ ಮನುಷ್ಯರು ದೇಹಾಭಿಮಾನವನ್ನು ತ್ಯಾಗಮಾಡಿ, ಆತ್ಯಾಭಿಮಾನಿಗಳಾಗಬೇಕು ಎನ್ನುವುದೇ ಆಗಿದೆ. ಅಂದರೆ ಯಾವುದೇ ಮನುಷ್ಯನು ವಸ್ತುಗಳಿಗೆ, ವೈಭೋಗಗಳಿಗೆ ಮತ್ತು ಇಹಲೋಕದ ಭೋಗ, ಲಾಲಸೆಗಳಿಗೆ ವಶನಾಗದೇ ಅಥವಾ ಮನಸೋಲದೆ ಪಾರಮಾರ್ಥಿಕ ಮುಕ್ತಿ ಸಾಧನೆಗಾಗಿ ತನ್ನನ್ನು ತಾನು ಭಗವಂತನಿಗೆ ಸತ್ಯ ಮನಸ್ಸಿನಿಂದ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಮುಖಾಂತರ ಶರಣಾಗಬೇಕು ಎಂದು ತಿಳಿಸುವುದೇ ಶ್ರೀ ವಾಸವಿ ಮಾತೆಯ ಅವತಾರದ ಮುಖ್ಯ ಉದ್ದೇಶವಾಗಿದೆ ಎಂದು ಮನವಿ ಮೂಲಕ ತಿಳಿಸಿದರು.
ಶ್ರೀವಾಸವಿ ಮಾತೆಯನ್ನು ಬಾಲಕಿಯಾಗಿದ್ದಾಗ ವಾಸವಿ ಎಂದು ಕರೆದರು, ಮುಂದೆ ಅವಳು ಭಗವಂತನಾದ ಪರಮೇಶ್ವರನ ಯೋಗಾಗ್ನಿಯಲ್ಲಿ ಲೀನವಾದ ನಂತರ ಕನೈಯಿಂದ ಕನ್ಯಕಾಪರಮೇಶ್ವರಿಯಾದಳು. ಅದೇ ರೀತಿ ಸರ್ವಜನರು ಆ ಭಗವಂತನನ್ನು ಅರ್ಥಮಾಡಿಕೊಂಡು ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಉದ್ದೇಶ ಪೂರ್ಣಮಾಡಬೇಕು. ಶ್ರೀವಾಸವಿ ಮಾತೆಯು ನಮಗೆಲ್ಲಾ ಆ ಭಗವಂತನನ್ನು ಸರಳವಾಗಿ ಅರ್ಥಮಾಡಿಸಿ, ಪರಿಚಯಿಸಿ, ಪಾಲನೆ ನೀಡಿದ್ದು, ಇದರಿಂದ ಅವಳನ್ನು ಆರ್ಯವೈದ್ಯ ಕುಲೋದ್ಧಾರಿಣಿ, ಆದಿಶಕ್ತಿಯ ಅಪರಾವತಾರ ಆದಿ ಪರಾಶಕ್ತಿ, ಶ್ರೀದೇವಿ ಅಥವಾ ಅಮ್ಮನವರೆಂದು ಕರೆದು ಪೂಜಿಸುತ್ತೇವೆ. ಇಂತಹ ತ್ಯಾಗ ಮತ್ತು ಪವಿತ್ರತೆ ಎಂಬ ಅಂಶಗಳು ಸರ್ವ ಜನಾಂಗದವರಿಗೂ ಅನ್ವಯಿಸುವಂತದ್ದು. ಮನುಕುಲವು ಅನುಸರಿಸುವಂತದ್ದಾಗಿದೆ ಎಂದರು.
ತಾವುಗಳು ವಿವಿಧ ಸಮಾಜದ ಪ್ರಮುಖ ಪೂಜ್ಯನೀಯ ದೇವರುಗಳ ಮತ್ತು ಮಹನೀಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ಆಚರಿಸಿಕೊಂಡು ಬಂದಿರುತ್ತೀರಿ. ಅದರಂತೆ ಆರ್ಯವೈಶ್ಯ ಸಮಾಜದ ಕುಲದೇವತೆ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಸರ್ಕಾಲ ಕಾರ್ಯಕ್ರಮವನ್ನಾಗಿ ಘೋಷಿಸಿ, ಆಚರಣೆ ತರಬೇಕು ಎಂದು ಆರ್ಯವೈಶ್ಯ ಸಮಾಜದ ಮುಖಂಡರು ಮನವಿ ಮಾಡಿದರು.
ಆರ್ಯವೈಶ್ಯ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಗುಪ್ತಾ, ರಾಜ್ಯ ಉಪಾಧ್ಯಕ್ಷ ಹನುಮಂತಯ್ಯ, ನಾರಾಯಣ ಕುರುಗೋಡ, ರಾಘವೇಂದ್ರ ಕಾರಟಗಿ, ಹನುಮೇಶ ಕುಷ್ಟಗಿ, ಆನಂದ ಶಿರಹಟ್ಟಿ, ಭಾಗ್ಯನಗರದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ ಇದ್ದರು.
