3

ಅಧಿಕ ಮಳೆಯಿಂದ ವಿವಿಧೆಡೆ ನಷ್ಟ, ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 22- ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಹಾನಿ ಕುರಿತು ಮೊಬೈಲ್ ಆಧಾರಿತ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ ನಿಗಧಿತ ಅವಧಿಯೊಳಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದರು.

ಮಳೆಯಿಂದಾದ ಹಾನಿಗೆ ಸಂಬ0ಧಿಸಿದ0ತೆ ಜಿಲ್ಲಾಡಳಿತ ಭವನದ ಕೆಸ್ವಾನ್‌ಹಾಲ್‌ನಲ್ಲಿ ನಡೆದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಹಲವು ಕಡೆ ೬೦ ರಿಂದ ೭೦ ಮಿ.ಮೀ ನಷ್ಟು ಮಳೆ ನಿರಂತರವಾಗಿ ಸುರಿಯುತ್ತಿದೆ. ಜಿಲ್ಲೆಯ ಒಟ್ಟು ೧೬ ಹೊಬಳಿಯಲ್ಲಿ ನಿರಂತರವಾಗಿ ಮಳೆ ಸುರಿದು ಕೆರೆ, ಕಟ್ಟೆಗಳೆಲ್ಲಾ ತುಂಬಿವೆ. ಇನ್ನೂ ಒಂದು ವಾರ ಮಳೆ ಬರುವ ಸಂಭವವಿದ್ದು ಅಧಿಕಾರಿಗಳು ಮುಂಜಾಗ್ರತಾ ಕ್ರಮವನ್ನ ವಹಿಸಬೇಕಾಗುತ್ತದೆ ಎಂದರು.

ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಆಯಾ ಭಾಗಗಳಿಗೆ ತಕ್ಷಣವೇ ಭೇಟಿ ನೀಡಿ ಹಾನಿಯಾದ ಬೆಳೆಗಳ ವರದಿ ತೆಗೆದುಕೊಂಡು ನಿಯಮಾನುಸಾರ ಕ್ರಮವಹಿಸಬೇಕು ಎಂದರು.

ಮೆಕ್ಕೆಜೋಳ ಕಟಾವಿಗೆ ಬಂದಿದೆ, ಇದು ನಿರಂತರ ಮಳೆಯಿಂದಾಗಿ ಹೊಲದ ತುಂಬೆಲ್ಲಾ ನೀರು ನಿಂತು ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಅದೇ ರೀತಿ ಕೆಲವು ಕಡೆ ಈರುಳ್ಳಿ ಬೆಳೆಯು ಮಳೆಗೆ ಸಿಲುಕಿದ್ದು ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ಸಲಹೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಹಿಂದೆ ೨೬೭ ಮನೆಗಳು ಬಿದ್ದ ಬಗ್ಗೆ ವರದಿಯಾಗಿತ್ತು. ಬಾಕಿ ಮನೆಗಳಿಗೆ ಪರಿಹಾರ ಕೊಡಲು ಕ್ರಮವಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಬಿದ್ದ ಮನೆಗಳಿಗೆ ಪರಿಹಾರ ಧನ ದೊರಕಿಸಲಾಗಿದೆ ಎಂದು ಅಧಿಕಾರಿಗಳಿಗೆ, ಸಭೆಗೆ ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿಗಳಾದ ಇ ಬಾಲಕೃಷ್ಣಪ್ಪ ಅವರು ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಉಂಟಾದ ಮಳೆ ಹಾನಿಯ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದರು. ಜಿಲ್ಲೆಯ ಪ್ರತಿ ತಾಲೂಕಿನ ಮನೆಗಳಿಗೆ ಭೇಟಿ ನೀಡಿ ಕಂದಾಯ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಹೊಸಪೇಟೆ ತಾಲೂಕಿನ ತಹಶೀಲ್ದಾರರಾದ ಶೃತಿ ಎಂ.ಎಂ ಹಾಗೂ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!