ರಾಣಿ ಚನ್ನಮ್ಮ ಜಯಂತ್ಯುತ್ಸವಕ್ಕೆ ಸಿದ್ಧತೆ ಮಾಡಿ : ಸಿದ್ರಾಮೇಶ್ವರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 8- ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾ ಕೇಂದ್ರದಲ್ಲಿ ಅಕ್ಟೋಬರ್ ೨೩ ರಂದು ಆಚರಿಸಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಕಾನ್ಪರೆನ್ಸ್ ಹಾಲ್ ನಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ಅಕ್ಟೋಬರ್ ೨೩ ರಂದು ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಎಲ್ಲ ಗಣ್ಯರಿಗೆ ಆಹ್ವಾನ ನೀಡಬೇಕು. ಕೆಲಸ ಹಂಚಿಕೆ ಮಾಡಿದಂತೆ ಆಯಾ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ನಗರದ ಪ್ರಮುಖ ವೃತ್ತಗಳಲ್ಲಿ ಅಂದು ನಗರಸಭೆಯಿಂದ ದೀಪಾಲಂಕಾರವಾಗಬೇಕು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಶುಚಿತ್ವ ಕಾರ್ಯವಾಗಬೇಕು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಹಳ್ಳಿ ಅವರು ಮಾತನಾಡಿ, ಅಕ್ಟೋಬರ್ ೨೩ ರಂದು ಬೆಳಿಗ್ಗೆ ೯ಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಯು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಅಂಬೇಡ್ಕರ್ ಸರ್ಕಲ್, ಶಾರದಾ ಟಾಕೀಸ್, ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯಭವನದವರೆಗೆ ನಡೆಯಲಿದೆ. ಬೆಳಿಗ್ಗೆ ೧೧ಕ್ಕೆ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಇರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧೀಕ್ಷಕರಾದ ನಾಗವ್ವ ಹೆಚ್, ತಾಲೂಕು ಅಭಿವೃದ್ದಿ ಅಧಿಕಾರಿ ಸುರೇಶ ಬಿ.ಕೆ., ಜಿಲ್ಲಾ ಆಯುಷ್ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿ ಸೀತಾ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಾದ ಸತ್ಯನಾರಾಯಣ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ. ನಾಗರಾಜ, ರೇಷ್ಮೆ ಇಲಾಖೆಯ ನಿರ್ದೇಶಕರಾದ ಅಕ್ಕಮಹಾದೇವಿ ಬಡಿಗೇರ, ಪೂರ್ವ ವಿಶ್ವವಿದ್ಯಾಲಯದ ಉಪ ನಿರ್ದೇಶಕರಾದ ಎಂ ರಮೇಶ್, ಡಿಎಸ್‌ಓ ಕೊಪ್ಪಳ ಸುಧಾಕರ್ ಮಾನೆ, ಕೌಶಲ್ಯಾಭಿವೃದ್ದಿ ಇಲಾಖೆಯ ಎಡಿ ಮಂಜುನಾಥ ಬಿಲ್ಲದ್, ಪಂಚಾಯತ್ ರಾಜ್ ಇಂಜಿನೀಯರಿ0ಗ್ ವಿಭಾಗದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಕಿತ್ತೂರು ರಾಣಿ ಚನ್ನಮ್ಮ ಸಮಾಜದ ಅಧ್ಯಕ್ಷರಾದ ಕರಿಯಪ್ಪ ಮೇಟಿ ಹಾಗೂ ಮುಖಂಡರುಗಳಾದ ಶ್ರೀಮತಿ ಗಿರಿಜಾ ಪೊಲೀಸ್ ಪಾಟೀಲ್, ಸುಮಂಗಲಾ ಹಂಚಿನಾಳ, ಸುಜಾತಾ ಎಸ್. ಪಟ್ಟಣಶೆಟ್ಟಿ, ಮಹಾಂತೇಶ ಮಲ್ಲನಗೌಡರ, ಎಸ್.ಟಿ ಹಂಚಿನಾಳ, ಶ್ರೀಮತಿ ರಾಣಿ ಸುರಟೂರು ಸೇರಿದಂತೆ ಇನ್ನೀತರರು ಇದ್ದರು.
