ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? : ವೀಣಾ ಪಾಟೀಲ್
ಕರುನಡ ಬೆಳಗು ಸುದ್ದಿ
ತುಸು ಕಂಪಿಸುವ ದೇಹ, ಕೆದರಿದ ತಲೆ ಕೂದಲು, ನೋವು ಮತ್ತು ಜ್ವರದ ಭಾದೆಯಿಂದ ಬಳಲುತ್ತಿರುವ ಆ ಹೆಣ್ಣು ಮಗಳು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತನ್ನ ತಾಯಿಯೊಂದಿಗೆ ನಮ್ಮ ಮನೆಯ ಬಾಗಿಲಿಗೆ ಬಂದಳು. ಚಹಾ ಮಾಡಿಕೊಟ್ಟು ಆಕೆ ಕುಡಿಯುವವರೆಗೆ ಸುಮ್ಮನಿದ್ದ ನಾನು ಆಮೇಲೆ ಏನಾಯ್ತು? ಎಂದು ಕೇಳಿದಾಗ ಆಕೆ ತನ್ನ ಪ್ರವರ ಬಿಚ್ಚಿಟ್ಟಿದ್ದು ಹೀಗೆ.
ಪುಟ್ಟ ಊರಿನಲ್ಲಿ ವಾಸವಾಗಿರುವ ಆಕೆ ಆತನನ್ನು ಪ್ರೀತಿಸಿ ಅಂತರ್ಜಾತಿಯ ವಿವಾಹವಾಗಿದ್ದು 14 ವರ್ಷಗಳು ಕಳೆದಿವೆ. ಹೈಸ್ಕೂಲಿನಲ್ಲಿ ಓದುತ್ತಿರುವ ಓರ್ವ ಹೆಣ್ಣು ಮಗಳು ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಓರ್ವ ಮಗ ಅವರಿಗೆ ಇದ್ದಾನೆ. ಇತ್ತೀಚೆಗೆ ಮನೆಯನ್ನು ಕಟ್ಟಿಕೊಂಡಿರುವ, ಮನೆಯಲ್ಲಿಯೇ ಪುಟ್ಟ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ ಇದರ ಜೊತೆ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆ ಹೆಣ್ಣು ಮಗಳನ್ನು ನೋಡಿದರೆ ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿದೆ ಎಂದು ಕಾಣುವ ಸಂಸಾರ ಅವರದು.
ಪುಟ್ಟದೊಂದು ಸಂಸ್ಥೆಯಲ್ಲಿ ಎರಡುವರೆ ಸಾವಿರ ಸಂಬಳಕ್ಕೆ ದುಡಿಯುವ ಆಕೆಯ ಪತಿ ಕೆಲಸಕ್ಕೆ ಹಾಜರಾದದ್ದಕ್ಕಿಂತ ಗೈರಾದದ್ದೆ ಹೆಚ್ಚು. ಮನೆಯ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುವ ಆಕೆ ತನ್ನ ಅಂತರ್ಜಾತಿಯ ವಿವಾಹದ ಕಾರಣದಿಂದಾಗಿ ತನ್ನ ಪತಿಯ ಬೇಜವಾಬ್ದಾರಿತನವನ್ನು ಮುಚ್ಚಿಟ್ಟು ನಾಲ್ಕು ಜನರಂತೆ ಬದುಕಬೇಕೆಂಬ ಅದಮ್ಯ ಆಶಯವನ್ನು ಹೊಂದಿದ್ದಾಳೆ.
ಪದೇ ಪದೇ ಸಾಲ ಮಾಡಿ, ಇಲ್ಲವೇ ತಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಹಣವನ್ನು ಲಪಟಾಯಿಸಿ ಉಡಾಯಿಸಿ ಮನೆಗೆ ಬರುವುದು ಆತನಿಗೆ ರೂಢಿಯಾಗಿದ್ದು ಇರುವ ಆ ಪುಟ್ಟ ನೌಕರಿಯು ಹೋಗಬಾರದೆಂದು ಈಕೆ ಒಂದೆರಡು ಬಾರಿ ಸಾವಿರಾರು ರೂಗಳನ್ನು ಮರಳಿ ಸಂಸ್ಥೆಗೆ ಕಟ್ಟಿ ತನ್ನ ಗಂಡನ ನೌಕರಿಯನ್ನು ಉಳಿಸಿಕೊಟ್ಟಿದ್ದಾಳೆ. ಇಷ್ಟಾದರೂ ಇಲ್ಲಿಯವರೆಗೆ ಆತ ಒಂದು ಪೈಸೆ ಹಣವನ್ನು ಮನೆಯ ಖರ್ಚಿಗೆ ತಂದು ಕೊಟ್ಟಿಲ್ಲ.
ಆತನ ವಯಸ್ಸಾದ ತಂದೆ ತಾಯಿ ಈತನ ಹುಚ್ಚಾಟಗಳಿಂದ ಬೇಸತ್ತು ತಮ್ಮದೇ ಆದ 2 ಎಕರೆ ಹೊಲದಲ್ಲಿಯೇ ಪುಟ್ಟದಾದ ಮನೆ ಮಾಡಿಕೊಂಡು ಜೀವಿಸುತ್ತಿದ್ದಾರೆ. ಓರ್ವ ತಮ್ಮನಿದ್ದು ಆತನು ಕೂಡ ಇವರಿಂದ ದೂರ ಇದ್ದಾನೆ.
ಗಂಡನ ಎಲ್ಲ ತಿರುಬೋಕಿ ಕೆಲಸಗಳನ್ನು ಸಹಿಸಿಕೊಂಡು ಬದುಕುತ್ತಿರುವ ಆ ಹೆಣ್ಣು ಮಗಳು ಗಂಡನಿಗೆ ತಕರಾರು ಮಾಡಿದಾಗಲೆಲ್ಲ ಆಕೆಯ ಫೋನಿನಿಂದ ಆಕೆ ಕೆಲಸ ಮಾಡುತ್ತಿರುವ ಸಂಸ್ಥೆಯ ಇತರ ಪುರುಷ ಸಹೋದ್ಯೋಗಿಗಳಿಗೆ ಆಕೆಯದೆ ಮೊಬೈಲ್ ಅನ್ನು ಬಳಸಿ ಸಂದೇಶಗಳನ್ನು ಕಳಿಸಿ ಅವುಗಳ ಸ್ಕ್ರೀನ್ ಶಾಟ್ ಗಳನ್ನು ತೆಗೆದು ತನ್ನ ಮೊಬೈಲ್ಗೆ ರವಾನಿಸಿ ಆಕೆಗೆ ಅವರೆಲ್ಲರೊಂದಿಗೆ ಅಶ್ಲೀಲ ಸಂಬಂಧವಿರುವುದಾಗಿ ಹೇಳುತ್ತೇನೆ ಎಂದು ಆಕೆಯನ್ನು ಬೆದರಿಸುತ್ತ ತನ್ನ ಕೆಲಸ ಸಾಧಿಸಿಕೊಳ್ಳುತ್ತಾನೆ. ಈಗಾಗಲೇ ತವರಿನವರ ಬೆಂಬಲವನ್ನು ಕಳೆದುಕೊಂಡಿರುವ ಆಕೆ ಸಮಾಜದಲ್ಲಿ ತನ್ನ ಮರ್ಯಾದೆ ತೆಗೆದಾನು ಎಂಬ ಭಯದಿಂದ ಸುಮ್ಮನಾಗಿಬಿಡುತ್ತಿದ್ದಳು.
ಇತ್ತೀಚೆಗೆ ಗಂಡ ತನ್ನ ದುಶ್ಚಟಕ್ಕೆ ಸಾಲ ಎತ್ತಿದ್ದು ಗೊತ್ತಾಗಿ ಸ್ವಲ್ಪ ಕೂಗಾಡಿದಾಗ ಆತ ಆಕೆಯನ್ನು ಮನಬಂದಂತೆ ಥಳಿಸಿ, ತಲೆ ಕೂದಲು ಹಿಡಿದೆಳೆದು ನಡುರಸ್ತೆಯಲ್ಲಿ ನೆಲಕ್ಕೆ ಬೀಳಿಸಿ ಹಿಗ್ಗಾಮುಗ್ಗ ಹೊಡೆದಿದ್ದಾನಲ್ಲದೇ, ಬಿಡಿಸಲು ಬಂದ ವಸತಿ ಶಾಲೆಯಿಂದ ರಜಾ ದಿನಗಳನ್ನು ಕಳೆಯಲು ಮನೆಗೆ ಬಂದ ಮಗಳನ್ನು ಕೂಡ ಹಿಗ್ಗಾಮುಗ್ಗ ಹೊಡೆದು ಅಶ್ಲೀಲವಾಗಿ ಮಾತನಾಡಿ ನೋಯಿಸಿದ್ದಾನೆ.
ಆತನ ಹೊಡೆತದಿಂದ ತನ್ನ ಬೆನ್ನಿನಲ್ಲಿ ಉಂಟಾದ ಗಾಯಗಳಿಗೆ ಚಿಕಿತ್ಸೆ ಪಡೆಯಲು ಆಕೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ದೂರನ್ನು ನೀಡದೆ ಚಿಕಿತ್ಸೆ ನೀಡಲಾಗದು ಎಂದು ಹೇಳಿ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಆಕೆಯ ಹೇಳಿಕೆಯನ್ನು ಪಡೆದುಕೊಂಡ ಮೇಲೆ ವೈದ್ಯೋಪಚಾರ ಪಡೆದುಕೊಂಡ ಆಕೆ ಪೊಲೀಸರ ಸಲಹೆಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿದ್ದಳು.
ನಂತರ ನಮ್ಮ ಮನೆಗೆ ಬಂದ ಆಕೆ ಈ ಎಲ್ಲಾ ವಿಷಯಗಳನ್ನು ವಿಷದವಾಗಿ ಹೇಳಿದ ನಂತರ ಮತ್ತೊಮ್ಮೆ ಪೊಲೀಸ್ ಕಂಪ್ಲೇಂಟ್ ಕೊಡಲೇ, ಬೇಡವೇ ಎಂದು ಸಲಹೆ ಕೇಳಲು ನನ್ನ ಪತಿಯ ಬಳಿ ತನ್ನ ತಾಯಿಯೊಂದಿಗೆ ಬಂದಿದ್ದಳು.
ಇಷ್ಟೆಲ್ಲಾ ಆದರೂ ಪತಿಯನ್ನು ಬಿಡಲೊಪ್ಪದ ಆಕೆ ತನ್ನ ಪತಿಯನ್ನು ಕರೆಸಿ ಬುದ್ದಿ ಹೇಳಲು ಕೇಳಿಕೊಂಡಳು. ಬುದ್ಧಿ ಹೇಳಿದರೆ ಸರಿ ಹೋದಾನು ಎಂಬ ಆಶಯ ಮತ್ತು ನಾಲ್ಕು ಜನರ ನಡುವೆ ತಲೆ ಎತ್ತಿ ಬಾಳಲು ಗಂಡ ಜೊತೆಗೆ ಇರಬೇಕು ಎಂಬ ಅನಿವಾರ್ಯತೆಯ ಸಾಮಾಜಿಕ ವ್ಯವಸ್ಥೆಯ ಬಲಿಪಶು ಆಕೆ.
ದೇಶದ ಪ್ರತಿಯೊಂದು ಗ್ರಾಮಗಳಲ್ಲಿ, ಪುಟ್ಟ ಊರುಗಳಲ್ಲಿ ಶಹರಗಳಲ್ಲಿ ಇಂತಹ ಲಕ್ಷಾಂತರ ಮಹಿಳೆಯರು ಗಂಡಂದಿರ ಬೇಜವಾಬ್ದಾರಿತನ, ಕುಡಿತ, ದುಶ್ಚಟಗಳ ದಾಸ್ಯ, ಅನುಮಾನ ಶಂಕೆಗಳನ್ನು ಸಹಿಸಿ ಬದುಕು ಸಾಗಿಸುತ್ತಿದ್ದಾರೆ. ಮನೆ ಗಂಡ ಮಕ್ಕಳು ಎಂಬ ಎಲ್ಲ ಜವಾಬ್ದಾರಿಗಳನ್ನು ಹೊತ್ತಿರುವ ಈ ಹೆಣ್ಣು ಮಕ್ಕಳಿಗೆ ಈ ಎಲ್ಲ ಕೆಲಸಗಳಿಗೆ ಪ್ರತಿಯಾಗಿ ಸಿಗುವುದು ನೋವು, ಅವಮಾನ ಮತ್ತು ಕುಡಿದು ಬಂದ ಗಂಡನಿಂದ ಭರಿಸಲಾಗದ ಹಿಂಸೆ ಮತ್ತು ಹೊಡೆತಗಳು.ಪುಟ್ಟದಾದರೂ ಮನೆಯ ಬಾಡಿಗೆ, ಮಕ್ಕಳ ಶಾಲೆಯ ಫೀಹಣ, ಪುಸ್ತಕ ಬಟ್ಟೆ ಬರೆ ಆರೋಗ್ಯದ ಸಮಸ್ಯೆಗಳಿಗಾಗಿ ಹಣ ಸಾಲದೆ ತಾನು ಕೆಲಸ ಮಾಡುವ ಕಡೆ ಇಡೀ ದೇಹವನ್ನು ಮುದುರಿ ಬಾಗಿಸಿ ಹಣಕ್ಕಾಗಿ ಇನ್ನಿಲ್ಲದ ಯಾಚನೆ ಮಾಡುವುದು ಆಕೆ ಪಡೆದುಕೊಂಡು ಬಂದಿರುವ ಸೌಭಾಗ್ಯ. ದುಡ್ಡು ಕೊಟ್ಟ ಮಾಲಕರು ಆಕೆಯನ್ನು ಕೊಂಡುಕೊಂಡಂತೆ ಬೇಕಾಬಿಟ್ಟಿಯಾಗಿ ಕೆಲಸ ಮಾಡಿಸಿಕೊಳ್ಳುವುದನ್ನು ಅನಿವಾರ್ಯವಾಗಿಯಾದರೂ ಆಕೆ ಸಹಿಸಿಕೊಳ್ಳಲೇಬೇಕು.
ಹಾಗಾದರೆ ಸ್ತ್ರೀ ಶೋಷಣೆಗೆ ಮುಕ್ತಿ ಇಲ್ಲವೇ ?
ಅಂತಹ ಹೆಣ್ಣು ಮಕ್ಕಳು ಕೂಡ ಸಾಮಾಜಿಕವಾಗಿ ತಲೆಯೆತ್ತಿ ಬದುಕಲು ಸಾಧ್ಯವಾಗುವಂತಹ ಜೀವನವನ್ನು ಸಾಗಿಸುವುದು ಶಕ್ಯವೇ?
ಅದೆಷ್ಟೇ ಹೆಣ್ಣು ಮಕ್ಕಳ ಪರ ಕಾನೂನುಗಳು ಬಂದಿದ್ದರೂ ಸ್ವಾತಂತ್ರ್ಯದ ಏಳೆಂಟು ದಶಕಗಳು ಕಳೆದು ಹೋದರೂ ಹೆಣ್ಣು ಮಕ್ಕಳ ನೋವಿನ ಇನಿ ದನಿಗೆ ಕಿವಿಗೊಟ್ಟವರಿಲ್ಲ ಎಂಬುದು ವಿಪರ್ಯಾಸದ ಸಂಗತಿ.
ಖುದ್ದು ಹೆಣ್ಣು ಮಕ್ಕಳೇ ಮರ್ಯಾದೆಯ ಕಾರಣವನ್ನು ಒಡ್ಡಿ ತಮಗಾಗುವ ತೊಂದರೆಗಳನ್ನು ಹೇಳಿಕೊಳ್ಳುವುದಿಲ್ಲ. ತೀರಾ ಅನಿವಾರ್ಯವಲ್ಲದ ಹೊರತು ಪೊಲೀಸ್ ಠಾಣೆಯ ಮೆಟ್ಟಿಲನ್ನಂತೂ ಹತ್ತುವುದೇ ಇಲ್ಲ. ಗಂಟಲಿನ ಆಚೆ ಹೆಣ್ಣು ಮಕ್ಕಳ ಧ್ವನಿ ಹೊರಬರದಂತೆ ನಮ್ಮ ಪುರುಷ ಪ್ರಧಾನ ಸಮಾಜ ಆಕೆಯ ಬಾಯಿ ಮುಚ್ಚಿಸಿದರೆ ಮತ್ತೆ ಕೆಲವೊಮ್ಮೆ ಸಾಮಾಜಿಕ ತುಚ್ಚೀಕರಣಗಳು ಆಕೆಯನ್ನು ಸುಮ್ಮನಾಗಿಸುತ್ತವೆ.
ಕೌಟುಂಬಿಕ ಸಾಮರಸ್ಯವನ್ನು ಕಾಯ್ದುಕೊಳ್ಳಲು ಪ್ರತಿ ಬಾರಿಯೂ ಹೆಣ್ಣೇ ಬಲಿಪಶುವಾಗಬೇಕೇ ?
ಕುಟುಂಬದ ಎಲ್ಲಾ ಸದಸ್ಯರ ಹೊಟ್ಟೆ ಬಟ್ಟೆ ನೋಡಿಕೊಳ್ಳುವ, ಆರೋಗ್ಯ ಸಮಸ್ಯೆಗಳಿಗೆ ತಲೆ ಕೊಡುವ ತಮ್ಮ ಗಂಡನ ಕುಡಿತಕ್ಕೂ
ದುಡ್ಡು ಕೊಡುವ ಅನಿವಾರ್ಯತೆ ಆಕೆಯದ್ದು.
ಇಷ್ಟಾಗಿಯೂ ಛಲ ಬಿಡದೆ ಕೂಲಿ ನಾಲಿ ಮಾಡಿ, ನಾಲ್ಕು ಮನೆ ಮುಸುರೆ ತಿಕ್ಕಿ, ಬೇರೆಯವರ ಮನೆಯಲ್ಲಿ ಅಡುಗೆ ಕೆಲಸ ಮಾಡಿ, ಇಟ್ಟಿಗೆ, ಕಲ್ಲು ಹೊರುವ, ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ, ಹೋಟೆಲ್ಗಳಲ್ಲಿ, ಗಾರ್ಮೆಂಟ್ ಗಳಲ್ಲಿ ದುಡಿಯುವ ತನ್ನ ಕುಟುಂಬಕ್ಕಾಗಿ ತನ್ನ ದೈಹಿಕ ಆರೋಗ್ಯವನ್ನು ಕಡೆಗಣಿಸಿ ಕಾರ್ಯನಿರ್ವಹಿಸುವ ಮಹಿಳೆ ತನಗಾಗಿ ತನ್ನ ಪ್ರೀತಿ ಪಾತ್ರರಿಂದ ಬಯಸುವುದೇನು ಗೊತ್ತೇ?
ಹಿಡಿಯಷ್ಟು ಪ್ರೀತಿ ವಿಶ್ವಾಸ.
ಇಂತಹ ಮಹಿಳೆಯರು ಯಾವತ್ತೂ ಕಷ್ಟಗಳಿಗೆ ಅಂಜುವುದಿಲ್ಲ, ಅಳುಕಂತೂ ಇಲ್ಲವೇ ಇಲ್ಲ, ದೂರದಲ್ಲೆಲ್ಲೋ ತಮ್ಮ ಬದುಕಿನಲ್ಲೂ ಸಂತಸದ ಬೆಳ್ಳಿ ಕಿರಣ ಗೋಚರಿಸಬಹುದು ಎಂಬ ಆಸೆಯಿಂದ ಕಾಯುವ ಅದಮ್ಯ ಧೀಶಕ್ತಿಯ ಕೋಟ್ಯಂತರ ಹೆಣ್ಣು ಮಕ್ಕಳಿಗೆ ನನ್ನ ನಮನಗಳು.
