ಶೌಚಾಲಯ ಬಳಕೆಗೆ ಐಇಸಿ ಚಟುವಟಿಕೆಗಳ ಮೂಲಕ ಅರಿವು ಮೂಡಿಸಿ : ಸಿಇಓ
ಕರುನಾಡ ಬೆಳಗು ಸುದ್ದಿ
ವಿಜಯನಗರ, 17- ಶೌಚಾಲಯ ಬಳಕೆಗೆ ಕುರಿತು ಐಇಸಿ ಚಟುವಟಿಕೆಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮೊಹಮ್ಮದ್ ಅಕ್ರಮ ಅಲಿ ಷಾ ಅವರು ಹೇಳಿದರು.
“ಸ್ವಚ್ಛತಾ ಹೀ ಸೇವಾ ಪಾಕ್ಷೀಕ-೨೦೨೪” ರ ಕುರಿತು ವಿಜಯನಗರ ಜಿಲ್ಲಾ ಪಂಚಾಯತ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸ್ವಚ್ಚ ಭಾರತ್(ಗ್ರಾಮ) ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೆಪ್ಟೆಂಬರ್ ೧೬ರಂದು ಅಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಚ್ಛತಾ ಹೀ ಸೇವಾ ಪಾಕ್ಷೀಕ ಅಭಿಯಾನ ನಿಮಿತ್ತ ಅಕ್ಟೋಬರ್-೦೨ ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ *ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಪ್ರಮುಖ ಚಟುವಟಿಕೆಗಳನ್ನು ಆಯೋಜಿಸಿ, ಈ ಕಾರ್ಯಕ್ರಮಗಳಲ್ಲಿ ಜನ ಪ್ರತಿನಿಧಿಗಳು, ನರೇಗಾ, ಎನ್.ಆರ್.ಎಲ್.ಎಂ- ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರ ಸಹಕಾರದೊಂದಿಗೆ ೧೪ ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ. ಸಾರ್ವಜನಿಕ ಕಟ್ಟಡ ಆಸ್ವತ್ರೆ ಮುಂಭಾಗ ಮತ್ತು ಹಿಂಭಾಗ, ತೆರೆದ ಕಲ್ಯಾಣಿ, ಮತ್ತು ವೈಯಕ್ತಿಕ ಶೌಚಲಯಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದಿನದಂದು ೩ನೇ ಶನಿವಾರದಂದು ಸ್ವಚ್ಛತಾ ಶನಿವಾರವೆಂದು ಸ್ವಚ್ಛತೆ ಮಾಡಬೇಕು. ಸ್ವಚ್ಛತಾ ಹೀ ಸೇವಾ ಪಾಕ್ಷೀಕ-೨೦೨೪ರ ಅಂಗವಾಗಿ ಶಾಲಾ ಮಕ್ಕಳಿಂದ ದಿನ ಪ್ರತಿ ಸ್ವಚ್ಛತಾ ಕಾರ್ಯಕ್ರಮಗಳ ಕುರಿತು ಪ್ರಭಾತ್ ಪೇರಿ ಮಾಡಿಸಿ. ಕ್ವೀಜ್ (ಸ್ವಚ್ಛತಾ ಪ್ರಭಂಧ) ಪರೀಕ್ಷೆ ನೆಡೆಸಿ. ಈ ಅಭಿಯಾನದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮತ್ತು ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಎಲ್ಲಾ ಇಲಾಖೆಗಳ ಸಿಬ್ಬಂದಿಗಳ ಭಾಗವಹಿಸುವ ಮೂಲಕ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು, ಜಿಲ್ಲೆಯ ಎಲ್ಲಾ ವಿವಿಧ ಇಲಾಖೆಯ ಅಧಿಕಾರಿಗಳ ಮುಖ್ಯಸ್ದರಿಗೆ ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಕ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರು ಶೌಚಾಲಯ ಬಳಸುವಂತೆ ಐಇಸಿ ಚಟುವಟಿಕೆಗಳನ್ನು ಆಯೋಜಿಸಿ, ಸಾರ್ವಜನಿಕರಿಗೆ ಬಯಲು ಶೌಚಾಲಯದಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಬೀರುವ ಕುರಿತು ಅರಿವು ಮೂಡಿಸಿ. ಇದಲ್ಲದೆ ಪರಿಸರ ಆನೈರ್ಮಲ್ಯದಿಂದ ಉಂಟಾಗುವ ರೋಗಾಣುಗಳ ಕುರಿತು, ಮನೆಯ ಕಸವನ್ನು ಅಲ್ಲಿಯೇ ಹಸಿ ಕಸ ಮತ್ತು ಒಣ ಕಸ ಎಂದು ಬೇರ್ಪಡಿಸಿ, ಪ್ರತಿ ದಿನ ಗ್ರಾಮ ಪಂಚಾಯತಿಯಿಂದ ಬರುವ ಸ್ವಚ್ಛತಾ ವಾಹಿನಿಗೆ ನೀಡಲು ಜಾಗೃತಿ ಮಾಡಿಸಬೇಕು. ಈ ಅಭಿಯಾನದಲ್ಲಿ ಗ್ರಾಮ ಪಂಚಾಯತಗಳಲ್ಲಿ ವೈಯಕ್ತಿಕ ಶೌಚಾಲಯ ಇಲ್ಲದ ಕುಟುಂಬಗಳಿಗೆ ಗ್ರಾಮ ಪಂಚಾಯತಿ ಮೂಲಕ ಅರ್ಜಿ ಸಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ಮಾತನಾಡಿ, ಪ್ರತಿ ದಿನ ಗ್ರಾಮ ಪಂಚಾಯತಗಳಲ್ಲಿ ಸ್ವಚ್ಛತೆಗೊಳಿಸುವ ಮುಂಚೆ ಹಾಗೂ ಸ್ವಚ್ಛತೆಗೊಳಿಸಿದ ನಂತರ ಸ್ವಚ್ಛತಾ ಕಾರ್ಯಕ್ರಮದ ಪೋಟೋವನ್ನು ಸ್ವಚ್ಛತಾ ಹೀ ಸೇವಾ ವೆಬ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಶಂಕರ ನಾಯಕ್ ಅವರು ಮಾತನಾಡಿ, ಈಗಾಗಲೇ ನಮ್ಮ ಇಲಾಖೆಯಲ್ಲಿ ಪ್ರತಿ ದಿನ ಸ್ವಚ್ಛತೆಯ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಪಂ ಎಸ್.ಬಿ.ಎಂ (ಗ್ರಾ) ನೋಡಲ್ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಎಲ್ಲಾ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು, ಕುಡಿಯುವ ನೀರು ಮತ್ತು ನೈಮರ್ಲ್ಯ ಇಲಾಖೆ ಹಾಗೂ ಸ್ವಚ್ಛ ಭಾರತ್ ಹಾಗೂ ಎನ್.ಆರ್.ಎಲ್.ಎಂ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
