ಸುಭದ್ರ ದೇಶ ನಿರ್ಮಿಸಲು ಯುವ ಮತದಾರರು ಬಹು ಮುಖ್ಯ : ದುಂಡಪ್ಪ ತುರಾದಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಸುಭದ್ರ ದೇಶವನ್ನು ನಿರ್ಮಿಸಲು ಯುವ ಮತದಾರರ ಪಾತ್ರ ನಿರ್ಣಾಯಕವಾಗಿದೆಂದು ಮತದಾರರ ವಿಶೇಷ ಸಹಾಯಕ ನೊಂದಣಾಧಿಕಾರಿ ಹಾಗು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಕರೆ ನೀಡಿದರು.
ಅಳವಂಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಮತದಾರರ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಹಳಷ್ಟು ಯುವಕರು ಮತದಾನದ ಮಹತ್ವದ ಬಗ್ಗೆ ತಿಳಿದಿರುವದಿಲ್ಲ. ಸುಭದ್ರ ಸರ್ಕಾರಕ್ಕೆ ಪ್ರತಿ ಮತ ಅಮೂಲ್ಯ. ಮತದಾನ ಎನ್ನುವದು ಪವಿತ್ರವಾದ ಕಾರ್ಯ ಹಾಗು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ೧೮ ವರ್ಷ ತುಂಬಿದ ಎಲ್ಲಾ ಯುವಕ ಮತ್ತು ಯುವತಿಯರು ಅಗತ್ಯವಾದ ವರ್ಗಾವಣೆ ಪ್ರಮಾಣಪತ್ರದ ಪ್ರತಿ, ಆಧಾರ ಕಾರ್ಡ ಪ್ರತಿ, ೦೨ ಪಾಸ್ ಪಾರ್ಟ ಸೈಜ್ ಪೊಟೊ ಹಾಗು ಪಾಲಕರ ಮತದಾನ ಗುರುತಿನ ಚೀಟಿಯ ಪ್ರತಿಯೊಂದಿಗೆ ನಿಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗೆ ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಬೇಕೆಂದು ಯುವ ಮತದಾರರಿಗೆ ಕರೆ ನೀಡಿದರು. ನಿಮ್ಮ ಮನೆಯಲ್ಲಿ ಹಾಗು ಅಕ್ಕ ಪಕ್ಕದ ಮನೆಯಲ್ಲಿ ೧೮ ವರ್ಷ ತುಂಬಿದವರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಿಕೊಳ್ಳಲು ಮಾಹಿತಿ ನೀಡುವಂತೆ ತಿಳಿಸಿದರು.
ಕೊಪ್ಪಳ ತಹಶೀಲ್ದಾರ ವಿಠಲ್ ಚೌಗಲಾ ಮಾತನಾಡಿ ಪ್ರತಿಯೊಬ್ಬ ಯುವ ಮತದಾರ ನೊಂದಣಿ ಮಾಡಿಕೊಳ್ಳಬೇಕೆಂದರು. ಮತದಾನ ಎನ್ನುವದು ಪವಿತ್ರ ಕಾರ್ಯ ಚುನಾವಣಾ ಆಯೋಗದಿಂದ ಮತದಾನ ಗುರುತಿನ ಚೀಟಿ ವಿತರಣೆಯಾಗುತ್ತದೆ.
ಪ್ರತಿ ಚುನಾವಣೆಯಲ್ಲಿ ಮತದಾನ ಮಾಡುವದು ಎಲ್ಲರ ಕರ್ತವ್ಯ ಹಾಗು ಹಕ್ಕಾಗಿದೆ ಎಂದರು. ಒಮ್ಮೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದಲ್ಲಿ ಎಲ್ಲಾ ಚುನಾವಣೆಗಳಲ್ಲಿ ಮತದಾನ ಹಕ್ಕು ಚಲಾಯಿಸಬಹುದಾಗಿದೆ.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಜಗದೀಶ ಹಾಲದಕಟ್ಟಿ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ತಾಲೂಕ ಸ್ವೀಪ್ ತಂಡದ ಸದಸ್ಯ ಬಸವರಾಜ ಬಳಿಗಾರ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಬಸವರಾಜ, ಉಪನ್ಯಾಸಕರು, ಕಾಲೇಜಿನ ವಿದ್ಯಾರ್ಥಿಗಳು, ಹಾಜರಿದ್ದರು.
