ಮಗುವಿಗೆ ಎರಡು ಬಾರಿ ತಪ್ಪದೇ ದಡಾರ-ರೂಬೆಲ್ಲಾ ಲಸಿಕೆ ಹಾಕಿಸಿರಿ : ಡಾ.ಶೇಗುಫ್ತಾ ಷಾಹೀನ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 18- ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳನ್ನು ತಡೆಯಲು ದಡಾರ-ರೂಬೆಲ್ಲಾ ಒಳಗೊಂಡಂತೆ 12 ಮಾರಕ ರೋಗಗಳ ವಿರುದ್ದ ತಪ್ಪದೇ ಲಸಿಕೆಗಳನ್ನು ಹಾಕಿಸಲು ಪಾಲಕರು ಕೈಜೊಡಿಸಬೇಕು ಎಂದು ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೇಗುಫ್ತಾ ಷಾಹೀನ್ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ಅಲೆಮಾರಿ ಜನತೆ ಹೆಚ್ಚಿರುವ ಪದ್ಮಾವತೆಮ್ಮ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ದಡಾರವು ಸಾಂಕ್ರಾಮಿಕ ಮತ್ತು ಮರಣಾಂತಿಕ ಖಾಯಿಲೆಯೂ ಆಗಿದ್ದು, ಮಕ್ಕಳಲ್ಲಿ ಅಂಗವಿಕತೆ ಅಥವಾ ಸಾವನ್ನು ಸಹ ತರಬಹುದು. ಇದು ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ದಡಾರ ನಿಮ್ಮ ಮಗುವನ್ನು ನ್ಯುಮೋನಿಯಾ, ಅತಿಸಾರ, ಮೆದುಳಿನ ಸೋಂಕಿನಂತ ಪ್ರಣಾಂತಿಕ ಕಾಯಿಲೆಗಳಿಗೆ ತುತ್ತಾಗಬಹುದು. ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ಇವರು ದಡಾರದ ಮುಖ್ಯ ಲಕ್ಷಣಗಳಾಗಿವೆ ಎಂದು ತಿಳಿಸಿದರು.
ಗರ್ಭಿಣಿ ಸ್ತ್ರೀಯರಲ್ಲಿ ರೂಬೆಲ್ಲಾ ರೋಗವು ಮಕ್ಕಳಲ್ಲಿ ಜನ್ಮತಃವಾಗಿ ಬರುವ ಸಾಧ್ಯತೆ ಇದ್ದು, ಮೊದಲ ತ್ರೈಮಾಸಿಕ ಗರ್ಭಾವಸ್ಥೆಯಲ್ಲಿ ಮಗುವಿನ ವಿಪರೀತ ಅಥವಾ ಮರಣಾಂತಿಕ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದಾಗಿದೆ ಎಂದರು.
ಯಾವುದೇ ಮುಂಜಾಗ್ರತೆ ವಹಿಸದ ತಾಯಂದಿರಲ್ಲಿ ಕಂಡುಬರುವ ರೂಬೆಲ್ಲಾ ವೈರಸ್, ಮಗುವಿಗೆ ಗ್ಲುಕೋಮಾ, ಕಿವುಡುತನ, ಕಣ್ಣಿನಪೊರೆ, ಮೆದುಳು (ಮಾನಸಿಕತೆ ಅಸ್ವಸ್ಥತೆ ಅಥವಾ ಬುದ್ಧಿಮಾಂದ್ಯತೆ) ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಈಡು ಮಾಡಬಹುದು ಮತ್ತು ಗರ್ಭಪಾತ ಅಥವಾ ನಿರ್ಜೀವ ಜನನಕ್ಕೆ ಕಾರಣವಾಗಬಹುದು ಎಂದು ತಿಳಿಸಿಕೊಟ್ಟರು.
