ಗಂಗಾವತಿ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ, ಹೋಬಳಿ ಮಟ್ಟದಲ್ಲಿ ಇ-ಆಫೀಸ್ ಅನುಷ್ಠಾನಕ್ಕೆ ಕ್ರಮ ವಹಿಸಲು ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,21- ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲ ಕಂದಾಯ ಕಚೇರಿಗಳಲ್ಲಿ ಇ-ಆಫೀಸ್ ಅನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಂತೆ ಹೋಬಳಿ ಮಟ್ಟದಲ್ಲಿಯೂ ಇ-ಆಫೀಸ್ ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರದಂದು(ಫೆ.20) ಗಂಗಾವತಿ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಅವರು ಅಧಿಕಾರಿ, ಸಿಬ್ಬಂದಿಗಳೊAದಿಗೆ ಸಭೆ ನಡೆಸಿ ಮಾತನಾಡಿದರು.
ಕಡತ ವಿಲೇವಾರಿ ವಿಳಂಬ ತಪ್ಪಿಸುವ ಉದ್ದೇಶದಿಂದಾಗಿ ಕಂದಾಯ ಸಚಿವರು ಇ-ಆಫೀಸ್ ಮೂಲಕವೇ ಕಚೇರಿಯ ಎಲ್ಲ ಕಡತಗಳು ವಿಲೇವಾರಿ ಆಗಬೇಕು ಎಂದು ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದ್ದು, ಹೋಬಳಿ ಮಟ್ಟದಲ್ಲಿಯೂ ಅನುಷ್ಠಾನಗೊಂಡಲ್ಲಿ ಕಚೇರಿ ಕೆಲಸಗಳಲ್ಲಿ ವೇಗದ ಪ್ರಗತಿಯನ್ನು ಕಾಣಬಹುದು. ಇದರಿಂದ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳು ತಾಲ್ಲೂಕು ಕಚೇರಿಗಳಿಂದ ನಿರ್ವಹಿಸುವ ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ 371(ಜೆ), ಆವಕ-ಜಾವಕ ವಿಭಾಗ, ಇಲಾಖಾ ದಾಖಲಾತಿ ಸಂಗ್ರಹಣಾ ಕೊಠಡಿ, ಮುಂತಾದ ಸಂಕಲನ ವಿಭಾಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿದರು. ದಾಖಲಾತಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಜವಾಬ್ದಾರಿ ಹಾಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ತಹಶೀಲ್ದಾರ ನಾಗರಾಜ ಯು, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾದ ಜಯಲಕ್ಷ್ಮೀ, ವೀರಣ್ಣ ಸೇರಿದಂತೆ ತಹಶೀಲ್ದಾರ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
