
ರಾಜ್ಯಕ್ಕೆ ಬಿಜೆಪಿ ಕೊಡುಗೆ ಚೊಂಬು: ಸಚಿವ ತಂಗಡಗಿ
ಸುಳ್ಳು ಮತ್ತು ಸತ್ಯದ ನಡುವಿನ ಚುನಾವಣೆ
ಬಿಜೆಪಿಯಿಂದ ಧರ್ಮ, ಜಾತಿ ನಡುವೆ ಬೆಂಕಿ ಹಚ್ಚುವ ಪ್ರಯತ್ನ
ಬರ ಪರಿಹಾರ: ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ವಿರುದ್ಧ ಮುಂದುವರೆಯಲಿದೆ ಹೋರಾಟ
ಕುಷ್ಟಗಿ, 29 : ಭಾರಿ ಸುಳ್ಳು ಮತ್ತು ಸತ್ಯದ ನಡುವೆ ಚುನಾವಣೆ ನಡೆಯುತ್ತಿದ್ದು, ರಾಜ್ಯಕ್ಕೆ ಚೊಂಬು ನೀಡಿರುವ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ವತಿಯಿಂದ ಲೋಕಸಭಾ ಚುನಾವಣೆಯ ನಿಮಿತ್ತ ಕುಷ್ಟಗಿಯಲ್ಲಿ ಸೋಮವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ನಾವು ಅಭಿವೃದ್ಧಿ ಹೆಸರಿನಲ್ಲಿ ಮತಯಾಚಿಸುತ್ತಿದ್ದೇವೆ. ಬಿಜೆಪಿಯವರು, ಧರ್ಮ ಹಾಗೂ ಜಾತಿಗಳ ಮಧ್ಯೆ ಬೆಂಕಿ ಹಚ್ಚಿ ಮತ ಕೇಳುವ ಕೆಲಸ ಮಾಡುತ್ತಿದ್ದಾರೆ. ಜನತೆ ಇಂತಹದ್ದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಹತ್ತು ವರ್ಷಗಳಿಂದ ಸುಳ್ಳನ್ನೇ ಹೇಳಿಕೊಂಡು ಆಡಳಿತ ನಡೆಸಿದೆ. ನಮ್ಮ ರಾಜ್ಯದ ಪಾಲಿನ ತೆರಿಗೆ ಹಣ ನೀಡದೆ ಅನ್ಯಾಯವೆಸಗಿದೆ. ಬರ ಪರಿಹಾರಕ್ಕೆ ಮನವಿ ಮಾಡಿದರೆ ಆ ವಿಚಾರದಲ್ಲೂ ಕೇಂದ್ರ ಸರ್ಕಾರ ಸುಳ್ಳು ಹೇಳಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಬೀಸಿದ ಚಾಟಿಯಿಂದಾಗಿ ಪರಿಹಾರದ ಹೆಸರಿನಲ್ಲಿ ಕೇಂದ್ರ ಸರ್ಕಾರ ನೀಡಿರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಂಬಂತಾಗಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ಪಾಲಿನ ತೆರಿಗೆ ಹಣದಲ್ಲಿ 100ಕ್ಕೆ 13 ರೂಪಾಯಿ ಮಾತ್ರ ಕೇಂದ್ರ ವಾಪಸ್ ನೀಡುತ್ತಿದೆ. ಉತ್ತರ ಭಾರತದ ರಾಜ್ಯಗಳಿಗೆ 100ಕ್ಕೆ ಏಳು ಪಟ್ಟು ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯವೆಸಗುತ್ತಿದೆ. ಬರ ಪರಿಹಾರದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಮತಯಾಚನೆ ಮಾಡುತ್ತಿದ್ದು, ಎಲ್ಲಿಯೂ ಕೂಡ ಉದ್ಯೋಗ ನೀಡಿಕೆ, ರೈತರ ಸಾಲ ಮನ್ನಾ, ಕಪ್ಪು ಹಣ ವಾಪಸ್ ತರುವ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು. ಆದರೆ ಬಿಜೆಪಿ ರಾಜ್ಯಕ್ಕೆ ನೀಡಿರುವ ಕೊಡುಗೆ ಚೊಂಬು. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೋ? . ಜನತೆ ಒಮ್ಮೆ ಆಲೋಚಿಸಿ ಮತ ನೀಡಬೇಕು. ಸುಳ್ಳಿನ ಕೋಟೆ ಕಟ್ಟಿರುವವರ ಬಗ್ಗೆ ಗಮನವಿರಲಿ ಎಂದು ಸಚಿವ ಶಿವರಾಜ್ ತಂಗಡಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಹಂಪನಗೌಡ ಬಾದರ್ಲಿ, ಮಾಜಿ ಸಚಿವರು ಆದ ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಸಭಾಪತಿ ಸುದರ್ಶನ್, ಮಾಜಿ ಸಚಿವ ವೆಂಕಟರಮಣಯ್ಯ, ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸುಳ್ಳು ಹೇಳುವುದರಲ್ಲಿ ರೆಡ್ಡಿ ನಿಸ್ಸೀಮ: ತಂಗಡಗಿ
ಶಾಸಕ ಜನಾರ್ದನ್ ರೆಡ್ಡಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಆತನ ಮನೆ ದೇವರೇ ಸುಳ್ಳು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ರಲ್ಲ, ಎರಡನ್ನು ಕೂಡ ಕೊಟ್ಟಿಲ್ಲ. ಜನಾರ್ದನ್ ರೆಡ್ಡಿ ಅವರೇ ಕೆಲಸ ಕೊಟ್ಟಿಲ್ಲ ಅಂದ್ರೆ ಯಾರಿಗೆ ಹೊಡಿಯಬೇಕು ಎಂದು ಸಚಿವರು ಮಾರ್ಮಿಕವಾಗಿ ಪ್ರಶ್ನಿಸಿದರು.
ಮೇ 6 ರಂದು ಜನ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ನಿಮ್ಮ ಕಪಾಳಕ್ಕೆ ಹೊಡೆಯುತ್ತಾರೆ ಎಂದು ಛೇಡಿಸಿದರು.
ನೂರು ಸ್ಮಾರ್ಟ್ ಸಿಟಿಯಲ್ಲಿ ಮೂರೇ ಮೂರು ಸ್ಮಾರ್ಟ್ ಸಿಟಿ ಹೆಸರನ್ನು ಬಿಜೆಪಿ ಮಿತ್ರರು ಹೇಳಲಿ. ಬುಲೆಟ್ ರೈಲು ಓಡಿಸೋದಾಗಿ ಹೇಳಿದ್ರೀ ಬುಲೆಟ್ ರೈಲಿನ ಕಥೆ ಎಲ್ಲಿಗೆ ಬಂತು? ಪುಲ್ವಾಮಾ ದಾಳಿಯಿಂದ ಸೈನಿಕರ ಪತ್ನಿಯರ ಮಾಂಗಲ್ಯ ಕಿತ್ತವರು, ಆ ಬಗ್ಗೆ ತನಿಖೆ ನಡೆಸಿದ್ರಾ? ಎಂದು ವಾಗ್ದಾಳಿ ನಡೆಸಿದರು.