ಕವಲೂರು ಗ್ರಾಮದ ನೀರಿನ ಸ್ಥಳಗಳಿಗೆ ತಹಶೀಲ್ದಾರ, ಇಓ ಭೇಟಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಕೊಪ್ಪಳ ತಾಲೂಕಿನ ಕವಲೂರು ಗ್ರಾಮಕ್ಕೆ ಪೂರೈಸಲಾಗುತ್ತಿರುವ ಕುಡಿಯುವ ನೀರಿನ ಮೂಲಗಳು, ನೀರಿನ ಸರಬರಾಜು ವ್ಯವಸ್ಥೆ, ಕುಡಿಯಲು ಮತ್ತು ಬಳಕೆಗೆ ಲಭ್ಯವಿರುವ ನೀರಿನ ಬಗ್ಗೆ, ಶುದ್ಧ ಕುಡಿಯವ ನೀರಿನ ಘಟಕಗಳ ಕಾರ್ಯನಿರ್ವಹಣೆ ಮತ್ತು ಕೆರೆಗಳಿಗೆ ಕೊಪ್ಪಳ ತಹಶೀಲ್ದಾರರಾದ ವಿಠ್ಠಲ್ ಚೌಗಲಾ ಮತ್ತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಅವರು ಗುರುವಾರ ಜಂಟಿಯಾಗಿ ಕವಲೂರು ಗ್ರಾಮಕ್ಕೆ ಭೇಟಿ ನೀಡಿ ನಿರೀನ ಲಭ್ಯತೆ ಬಗ್ಗೆ ಖುದ್ದಾಗಿ ಪರಿಶೀಲಿಸಿದ್ದು ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಕವಲೂರು ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುತ್ತದೆ. ಗ್ರಾಮದಲ್ಲಿ 10 ಸರಕಾರಿ ಬೊರ್ವೆಲ್ ಗಳಿದ್ದು, ಅವುಗಳಲ್ಲಿ 05 ಕಾರ್ಯನಿವಹಿಸುತ್ತಿವೆ. ಇನ್ನೂಳಿದ 05 ಬೊರ್ವೆಲ್‌ಗಳು ಮೆಳೆಯ ಕೊರತೆಯಿಂದ ಬತ್ತಿರುತ್ತವೆ. ಗ್ರಾಮದಲ್ಲಿ ಲಭ್ಯವಿರುವ ಹೆಚ್ಚಿನ ಇಳುವರಿ ಇರುವ 03 ಸಂಖ್ಯೆ ಖಾಸಗಿ ಬೊರ್ವೆಲ್‌ಗಳನ್ನು ಬಾಡಿಗೆ ತೆಗೆದುಕೊಳ್ಳಲಾಗಿರುತ್ತದೆ. ಪ್ರತಿದಿನ ಟ್ಯಾಂಕರ್ ಮುಖಾಂತರ 04 ಟ್ರಿಪ್ ನೀರನ್ನು ಶಾಲೆ, ಅಂಗನವಾಡಿ ಹಾಗೂ ಹಾಸ್ಟೇಲ್‌ಗಳಿಗೆ ಪೂರೈಸಲಾಗುತ್ತಿದೆ. 03 ಕೆರೆಗಳಿದ್ದು, 02 ಕೆರೆಗಳಲ್ಲಿ ಸಾಕಷ್ಟು ಪ್ರಮಾಣದ ನೀರಿನ ಲಭ್ಯತೆ ಇರುತ್ತದೆ. 01 ಕೆರೆಯು ಖಾಲಿಯಾಗಿರುತ್ತದೆ. ತುಂಗಭದ್ರಾ ನದಿ ಪ್ರದೇಶದ ನೆಲೋಗಿಪುರ ಗ್ರಾಮದ ಹತ್ತಿರ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕವಲೂರು ಸೇರಿದಂತೆ ಅಳವಂಡಿ, ಹಟ್ಟಿ ಮತ್ತು ಬೊಚನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 14 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆ ಇರುತ್ತದೆ. ಆದರೆ ತುಂಗಭದ್ರಾ ನದಿ ಪಾತ್ರದ ನೀರು ಖಾಲಿಯಾಗಿರುವುದರಿಂದ ಕಳೆದ ಒಂದು ತಿಂಗಳಿಂದ ಈ ಯೋಜನೆಯ ಮೂಲಕ ಗ್ರಾಮಕ್ಕೆ ನೀರು ಪೂರೈಕೆ ಸ್ಥಗಿತವಾಗಿರುತ್ತದೆ.
ಗ್ರಾಮಕ್ಕೆ ತಹಶೀಲ್ದಾರರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಪ್ರಜಾವಾಣಿ ಮತ್ತು ಸುದಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ ಗ್ರಾಮಸ್ಥರಿಗೆ ಕುಡಿಯಲು ಕೆರೆಯ ನೀರೇ ಆಧಾರ ಎಂಬ ಪರಿಸ್ಥಿತಿ ಕಂಡು ಬಂದಿರುವುದಿಲ್ಲ. ಪತ್ರಿಕೆಯಲ್ಲಿ ಬತ್ತಿ ಹೋಗಿರುವ ಕೆರೆಯ ಚಿತ್ರವನ್ನು ಮಾತ್ರ ತೋರಿಸಿ ವರದಿ ಮಾಡಲಾಗಿರುತ್ತದೆ.
ಗ್ರಾಮದಲ್ಲಿರುವ ಸಾಕಷ್ಟು ನೀರಿನ ಸಂಗ್ರಹಣೆ ಇರುವ 02 ಕೆರೆಗಳ ಬಗ್ಗೆ ಯಾವುದೇ ವರದಿ ಪ್ರಕಟಿಸಿರುವುದಿಲ್ಲ. ಸರಕಾರಿ ಮತ್ತು ಖಾಸಗಿ ಬೊರ್ವೆಲ್ ಗಳಿಂದ ನೀರನ್ನು ಪೂರೈಸುತ್ತಿರುವ ಬಗ್ಗೆಯೂ ಯಾವುದೇ ವರದಿ ಮಾಡಿರುವುದಿಲ್ಲ. ಬತ್ತಿರುವ ಮತ್ತು ನೀರಿನ ಸಂಗ್ರಹಣೆ ಇರುವ ಒಂದು ಕೆರೆ ಅಕ್ಕ-ಪಕ್ಕದಲ್ಲೆಯಿದ್ದು, ಒಂದಕ್ಕೊಂದು ಹೊಂದಿಕೊಂಡಿರುತ್ತವೆ. ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ ಬತ್ತಿರುವ ಕೆರೆಯ ಪಾತ್ರದಲ್ಲಿನ ರಾಡಿ ನೀರನ್ನು ತೆಗೆದುಕೊಂಡು ಹೋಗಿ ಕುಡಿಯುವ ಪರಿಸ್ಥಿತಿ ಇರುವುದಿಲ್ಲ.
ಈ ಬಗ್ಗೆ ಗ್ರಾಮಸ್ಥರನ್ನು ಮಾತನಾಡಿಸಿದಾಗ ಅವರು ಬತ್ತಿಹೋಗಿರುವ ಕೆರೆಯ ಪಾತ್ರದಲ್ಲಿನ ರಾಡಿ ನೀರನ್ನು ತೆಗೆದುಕೊಂಡು ಹೋಗುವುದಿಲ್ಲವೆಂದು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ನೀರು, ಸರಕಾರಿ ಮತ್ತು ಖಾಸಗಿ ಬೊರವೇಲ್ ನೀರನ್ನು ಕುಡಿಯಲು ಮತ್ತು ಸಾಕಷ್ಟು ನೀರಿನ ಸಂಗ್ರಹಣೆ ಇರುವ ಕೆರೆಯ ನೀರನ್ನು ದಿನಬಳಕೆಗೆ ಬಳಸುತ್ತಿರುವುದಾಗಿ ಸಾರ್ವಜನಿಕರು ತಿಳಿಸಿರುತ್ತಾರೆ.
ಪ್ರಸ್ತುತ ಗ್ರಾಮಕ್ಕೆ 05 ಸರಕಾರಿ ಬೊರ್ವೆಲ್ ಗಳು, 03 ಖಾಸಗಿ ಬೊರೆವೆಲ್ ಗಳು, 04 ಟ್ರಿಪ್ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗುತ್ತಿದ್ದು, ಸಾಕಷ್ಟು ನೀರಿನ ಲಭ್ಯತೆ ಇರುತ್ತದೆ. ಯಾವುದೇ ನೀರಿನ ಅಭಾವ ಇರುವುದಿಲ್ಲ ಎಂದು ತಾಲೂಕು ಪಂಚಾಯತ್ ಸ್ಪಷ್ಟನೆ ನೀಡಿದೆ.
ಭೇಟಿಯ ವೇಳೆಯಲ್ಲಿ ಕಂದಾಯ ನೀರಿಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿ ಮತ್ತು ಗ್ರಾಮಸ್ಥರು ಹಾಜರಿದ್ದರು.

