ಕೂಸಿನ ಮನೆಗಳು ಮಕ್ಕಳ ಆರೈಕೆಯ ತಾಣಗಳಾಗಲಿ-ಬೆಣಕಲ್ ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಲಕ್ಷ್ಮವ್ವ ಜಂಬಣ್ಣ ನಡುವಲಮನಿ
ಕರುನಾಡ ಬೆಳಗು ಸುದ್ದಿ
ಕುಕನೂರ,18- ತಾಲೂಕಿನ ಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮುದಾಯ ಭವನದಲ್ಲಿ ಮಾಡಿರುವ ಕೂಸಿನ ಮನೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಲಕ್ಷ್ಮವ್ವ ಜಂಬಣ್ಣ ನಡುವಲಮನಿ ಉಧ್ಘಾಟನೆ ಮಾಡಿ, ಕೂಸಿನ ಮನೆಗಳನ್ನು ಮಾದರಿಯಾಗಿ ನಿರ್ವಹಿಸಬೇಕು ಮತ್ತು ಆರೈಕೆದಾರರು ಕೇಂದ್ರಕ್ಕೆ ಬರುವ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದರು.
ನಂತರ ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ ಕರ್ನಾಟಕ ಸರ್ಕಾರ 2022-23 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ರಾಜ್ಯಾದ್ಯಾಂತ 4000 ಕೂಸಿನ ಮನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಅದರಂತೆ ಕುಕನೂರ ತಾಲೂಕಿನ ಬೆಣಕಲ್ ಗ್ರಾಮ ಪಂಚಾಯತಿಯಲ್ಲಿ ಕೂಸಿನ ಮನೆಯನ್ನು ಪ್ರಾರಂಭಿಸಲಾಗಿದ್ದು, ಕೇಂದ್ರದಲ್ಲಿ 9 ತಿಂಗಳಿನಿಂದ 3 ವರ್ಷದ ಮಕ್ಕಳ ಲಾಲನೆ, ಪಾಲನೆ, ಪೋಷಣೆಯನ್ನು ತರಬೇತಿ ಹೊಂದಿದ ಆರೈಕೆದಾರರಿಂದ ಈ ಕೇಂದ್ರದಲ್ಲಿ ನಡೆಯಲಿದೆ, ಸಾಮಾನ್ಯವಾಗಿ 3 ವರ್ಷದ ಮಕ್ಕಳ ಮಾನಸಿಕ ಮತ್ತು ಬೌತಿಕ ಬೆಳವಣಿಗೆ ಸಾಮಾನ್ಯರಿಗಿಂತ ಶೇ 200 ಪಟ್ಟು ಹೆಚ್ಚು ಇರುತ್ತದೆ, ಅದಕ್ಕಾಗಿ ಕೇಂದ್ರದಲ್ಲಿ ಕ್ರಿಯಾತ್ಮಕ ಚಟುವಟಿಕೆಗಳು, ಬಣ್ಣ ಗುರುತಿಸುವುದು, ಭಾಷಾ ಜ್ಞಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ದಿನಚರಿಯ ಪ್ರಕಾರ ಚಟುವಟಿಕೆ ಮಾಡಿಸಲಾಗುತ್ತದೆ, ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರವಾಗಿ ಹಾಲು, ಕಿಚಿಡಿ, ಕಡ್ಲೆ ಉಂಡೆ, ಪಲಾವ್ ರೈಸ್, ಅನ್ನ ಬೇಳೆ ಸಾರು, ಮೊಟ್ಟೆ, ಬಾಳೆ ಹಣ್ಣು, ಗೋದಿ ಸಜ್ಜಕ ತರಕಾರಿಗಳನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಿ ಕೃಷ್ಣಾರಡ್ಡಿ, ಸದಸ್ಯರಾದ ಅನ್ನಮ್ಮ ಬಸವರಾಜ ತಿಪ್ಪರಸನಾಳ, ಮಲ್ಲಪ್ಪ ಬಳಿಗೇರ, ಶ್ರೀಕಾಂತ ಕರಿಗಾರ, ಮುದುಕಣ್ಣ ಸಣ್ಣೆಪ್ಪ ವಜ್ರಬಂಡಿ, ಸುಮಂಗಲಾ ವಜ್ರಬಂಡಿ, ಮುಖಂಡರಾದ ಜಂಬಣ್ಣ ನಡುವಲಮನಿ, ನಿಂಗಪ್ಪ ಹಂಚಿನಾಳ, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಂಥಪಾಲಕರು, ಗ್ರಾಮ ಕಾಯಕ ಮಿತ್ರರಾದ ಸವಿತಾ ಗೂಳಪ್ಪ ಮುತ್ತಾಳ, ಅಂಗನವಾಡಿ ಕಾರ್ಯಕರ್ತರಾದ ಅಂಬಮ್ಮ ವಜ್ರಬಂಡಿ, ಲಲಿತಾ ಕಡಗದ್, ಆರೈಕೆದಾರರಾದ ಜಯಶ್ರೀ ಮತ್ತು ಈರಮ್ಮ ಹಾಗೂ ಕೇಂದ್ರದ ಮಕ್ಕಳು ಇತರರಿದ್ದರು .
