WhatsApp Image 2024-04-08 at 6.28.40 PM

ನೀರಿನ ದಾಹ ತೀರಿಸಲು ಮುಂದಾದ ಆಟೋ ಚಾಲಕರ ಸಂಘ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 8-  ಬಿಸಿಲಿನ ತಾಪಮಾಣ ದಿನದಿಂದ ದಿನಕ್ಕೆ ಏರುತ್ತಿದ್ದು  ಪಟ್ಟಣದ ನೆರವು ಆಟೋ ಚಾಲಕರ ಸಂಘ ಸಾರ್ವಜನಿಕರಿಗೆ ನೀರಿನ ದಾಹ ತೀರಿಸಲೆಂದು ಆಟೋ ನಿಲ್ದಾಣದಲ್ಲಿ ಕಳೆದ ಒಂದು ತಿಂಗಳಿಂದ  ಕುಡಿಯುವ ನೀರಿನ ಅರವಟ್ಟಿಗೆಯನ್ನು ನಿರ್ಮಿಸಿದ್ದಾರೆ.

ಪ್ರತಿ ವರ್ಷವೂ ಬೇಸಿಗೆ ಆರಂಭದಿಂದ ಮೂರು ತಿಂಗಳ ವರೆಗೂ ಜನರಿಗೆ ಕುಡಿಯುವ ನೀರನ್ನು ಕಲ್ಪಿಸಿ ಮಾದರಿಯಾಗುತ್ತಿದ್ದಾರೆ. ಮರಿಯಮ್ಮನಹಳ್ಳಿ ವಾಣಿಜ್ಯ ಕೇಂದ್ರವಾಗಿದ್ದು ಜನಸಂದಣಿಯಿಂದ ಕೂಡಿರುತ್ತದೆ. ಪಟ್ಟಣಕ್ಕೆ ಆಗಮಿಸುವ ಸುತ್ತಲಿನ ಹಳ್ಳಿಗರು, ಕಾರ್ಮಿಕರು, ಅನ್ಯ ನಿಮಿತ್ತ ಕಾರ್ಯಗಳಿಗೆ ತೆರಳುವರಿಗೆ ಪಟ್ಟಣದ ಹೋಟೆಲ್ ಗಳಲ್ಲಿ ನೀರು ಕೊಡುವುದಿಲ್ಲ ವಾದ್ದರಿಂದ ಜನರ ದಾಹ ತಣಿಸಲು ಪ್ರತಿ ವರ್ಷ ಚಾಲಕರ ನೀರಿನ ಸೇವೆ ಶ್ಲಾಘನೀಯವಾಗಿದೆ.

ನೆರವು ಚಾರಿಟೇಬಲ್ ಟ್ರಸ್ಟ್  ಜಿಲ್ಲಾಧ್ಯಕ್ಷ ಅಂಜಿನಪ್ಪ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಹರಿಶ್ಚಂದ್ರ ನಾಯ್ಕ ಅರವಟ್ಟಿಗೆಗೆ ಚಾಲನೆ ನೀಡಿದ್ದು, ನೆರವು ಆಟೋ ಚಾಲಕರ ಸಂಘ ಅಧ್ಯಕ್ಷ ಕೆ ಭೀಮಪ್ಪ, ಕಾರ್ಯದರ್ಶಿ ರಮೇಶ್ ನಾಯ್ಕ, ದೇವದಾಸ್ ಗೌರವ ಅಧ್ಯಕ್ಷ, ಸೋಮಪ್ಪ, ಬಿ ಹನುಮಂತ, ಬೆಸ್ತ್ ರಾಘವೇಂದ್ರ, ಪರಶುರಾಮ ನೀರಿನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

ಪಟ್ಟಣ ಪಂಚಾಯಿತಿ ಹಾಗೂ ಹತ್ತಿರದ ಬಿಎಂಎಂ ಕಾರ್ಖಾನೆಯಿಂದ ಈ ಹಿಂದೆ ನೀರಿನ ಅರವಟ್ಟಿಗೆ ನಿರ್ಮಿಸಲಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಅರವಟ್ಟಿಗೆಯಿಂದ ದೂರ ಸರಿದಿದ್ದಾರೆ. ಸಾರ್ವಜನಿಕರ ತೆರಿಗೆ ವಸೂಲಿ ಮಾಡುವ ಪಂಚಾಯಿತಿ ಹಾಗೂ ಕೋಟ್ಯಾಂತರ ಲಾಭ ಗಳಿಸುವ ಕಾರ್ಖಾನೆಗಳು ಬೇಸಿಗೆ ದಾಹ ತೀರಿಸದಿರುವುದು ಶೋಚನೀಯ.

Leave a Reply

Your email address will not be published. Required fields are marked *

error: Content is protected !!