2c136fae-be38-4577-97e1-318669006cc9

ಸಚಿವ ತಂಗಡಗಿಗೆ ಬೈಪಾಸ್ ಹೋಗದಂತೆ ತಾಕೀತು ಮಾಡಿ : ಮುಖಂಡರ ಒತ್ತಾಯ

ಕರುನಾಡ ಬೆಳಗು ಸುದ್ದಿ

ಗಂಗಾವತಿ,17- ಇಲ್ಲಿ ಸಂವಿಧಾನ ಜಾಗೃತಿಯ ರಥಯಾತ್ರೆಯ ಸಭೆ ನಡೆಯುತ್ತಿದ್ದರೆ, ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಆದರೆ ಇಲ್ಲಿನ ಅಧಿಕಾರಿಗಳನ್ನು ಕನಕಗಿರಿಗೆ ಕರೆಯಿಸಿಕೊಂಡು ಸಚಿವ ಶಿವರಾಜ ತಂಗಡಗಿ ಉತ್ಸವದ ಸಭೆ ನಡೆಸುತ್ತಿದ್ದಾರೆ.

ಸಂವಿಧಾನ ಜಾಗೃತಿ ರಥಯಾತ್ರೆ ಮುಖ್ಯವೋ ಅಥವಾ ಉತ್ಸವ ಮುಖ್ಯವೋ..? ಗಂಗಾವತಿಯ ಪ್ರತಿಯೊಂದು ವಿಚಾರದಲ್ಲಿ ಶಿವರಾಜ ತಂಗಡಗಿ ಬೈಪಾಸ್ ಹೋಗುತ್ತಿದ್ದಾರೆ. ಹೀಗೆ ಹೋಗದಂತೆ ತಾಕೀತು ಮಾಡಬೇಕು ಎಂದು ದಲಿತಪರ ಸಂಘಟನೆಗಳ ಮುಖಂಡರು, ಶಾಸಕ ಜನಾರ್ದರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ.

ನಗರದ ಮಂಥನ ಸಭಾಂಗಣದಲ್ಲಿ ಶನಿವಾರ ಶಾಸಕ ಜನಾರ್ದರೆಡ್ಡಿ ನೇತೃತ್ವದಲ್ಲಿ ನಡೆದ ಸಂವಿಧಾನ ಜಾಗೃತಿ ರಥಯಾತ್ರೆಯ ಪೂರ್ವಭಾವಿ ಸಭೆಯಲ್ಲಿ, ನಾನಾ ಇಲಾಖೆಯ ಪ್ರಮುಖ ಅಧಿಕಾರಿಗಳು ಇರದಿರುವುದನ್ನು ಗಮನಿಸಿದ ದಲಿತ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ನೋಟೀಸ್ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಜನಾರ್ಧನರೆಡ್ಡಿ, ಸಚಿವರ ಸೂಚನೆ ಮೆರೆಗೆ ಕನಕಗಿರಿ ಉತ್ಸವದ ಕರ್ತವ್ಯ ನಿಯೋಜನೆಯಾಗಿರುವ ಕೆಲ ಅಧಿಕಾರಿಗಳು ಅಲ್ಲಿಗೆ ಹೋಗಿದ್ದಾರೆ. ಅಧಿಕಾರಿಗಳ ಬದಲಿಗೆ ಇಲಾಖೆಯ ಬೇರೆ ಸಿಬ್ಬಂದಿ ಬಂದಿದ್ದಾರೆ. ಅವರಿಗೆ ಜವಾಬ್ದಾರಿ ವಹಿಸಿ ಕೆಲಸ ಮಾಡಿಸಿಕೊಳ್ಳೊಣ.

ಇಡೀ ಜಿಲ್ಲೆಯಲ್ಲಿ ಎಲ್ಲಿಯೂ ನಡೆಯದಷ್ಟು ಅದ್ದೂರಿಯಾಗಿ ಸಂವಿಧಾನ ಜಾಗೃತಿ ರಥಯಾತ್ರೆಯನ್ನು ಸ್ವಾಗತಿಸಿಕೊಳ್ಳೊಣ ಎಂದರು. ಕೆಲ ಅಧಿಕಾರಿಗಳು ಅಂಬೇಡ್ಕರ್ ಜಯಂತಿ ಸೇರಿದಂತೆ ದಲಿತ ನಾಯಕರ ಜಯಂತಿ ಉದ್ದೇಶ ಪೂರ್ವಕ ಗೈರಾಗುತ್ತಿದ್ದು ಅಂಥವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಶಿವರಾಜ ತಂಗಡಗಿ ಅವರು ಅಂಬೇಡ್ಕರ್ ಇದ್ದ ಕಾರಣಕ್ಕಾಗಿಯೇ ಇಂದು ಮಿನಿಸ್ಟ್ರು ಆಗಿದ್ದಾರೆ. ಮೊದಲು ಸಂವಿಧಾನ, ಅಂಬೇಡ್ಕರ್. ಆ ಮೇಲೆ ಉತ್ಸವ ಎಂಬುವುದನ್ನು ಸಚಿವರು ಮರೆತಂತೆ ಕಾಣುತ್ತದೆ’ ಎಂದು ದಲಿತ ಮುಖಂಡ ಹಂಪೇಶ ಆರಿಗೋಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಶಾಸಕ ರೆಡ್ಡಿ, ನಗರದಲ್ಲಿ ಫೆ. 20ಕ್ಕೆ ಸಂವಿಧಾನದ ಜಾಗೃತಿ ರಥ ಗಂಗಾವತಿ ಪ್ರವೇಶಿಸಲಿದೆ. ಮೂರು ದಿನಗಳ ಕಾಲ ತಾಲ್ಲೂಕಿನಲ್ಲಿ ಸಂಚರಿಸಲಿದೆ. ಬೈಕ್ ರ್ಯಾಲಿ ಮಾಡುವ ಮೂಲಕ ಸ್ವಾಗತಿಸಿಕೊಳ್ಳೊಣ. ನಗರದ ವೃತ್ತಗಳಿಗೆ ಅಲಂಕಾರ ಮಾಡಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಶರಣಪ್ಪ ಕಾರ್ಯಕ್ರಮ ಉದ್ದೇಶ, ಹೇಗೆ ತಯಾರಿ ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ತಹಸೀಲ್ದಾರ್ ಯು. ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *

error: Content is protected !!