ಎಡಬಿಡದೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ಥವ್ಯಸ್ಥ : ಶಾಸಕರ ಭೇಟಿ
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 14- ಬುಧವಾರದಂದು ಸಾಯಂಕಾಲ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣದ ತಗ್ಗು ಪ್ರದೇಶಗಳಲ್ಲಿನೀರು ನಿಂತು ಹಳೆಯ ಜಂತಿ ಮನೆಗಳು ಶಿಥಿಲಾವಸ್ಥೆಗೆ ತಲುಪಿದ್ದು ಹಾನಿ ಸಂಭವಿಸಿದ ಸ್ಥಳಕ್ಕೆ ಶಾಸಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ಸರಕಾರದಿಂದ ಸಿಗುವ ಪರಿಹಾರವನ್ನು ನೀಡುವಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಂಜೆ ವೇಳೆ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಯಿಂದ ಕುಷ್ಟಗಿ ನಗರದ ವಿವಿಧ ಬಡಾವಣೆಗಳಲ್ಲಿ ನೀರು ನಿಂತು ಸಾವ೯ಜನಿಕರಿಗೆ ತೊಂದರೆಯಾಗಿದ್ದು ಕಂಡು ಬಂದಿತು. ಇಳಿಜಾರು ಪ್ರದೇಶದಲ್ಲಿ ರಭಸವಾಗಿ ಹರಿಯುತ್ತಿದ್ದ ನೀರು ಚರಂಡಿಗಳೆಲ್ಲ ತುಂಬಿ ಹರಿದು ಕಸ ಕಡ್ಡಿಗಳು, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ತ್ಯಾಜ್ಯವಸ್ತುಗಳು ರಸ್ತೆಮೇಲೆ ಹರಿದು ಎಲ್ಲೆಂದರಲ್ಲಿ ಬಿದ್ದಿರುವುದು ಕಂಡು ಬಂದಿತು.
ಸುದ್ದಿ ತಿಳಿದು ಶಾಸಕರು ಹಾಗೂ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಪಟ್ಟಣದ ಸಂದೀಪ್ ನಗರ, ೭ನೇ ವಾರ್ಡ ಶಾದಿ ಮಹಲ್ ಸುತ್ತ ಮುತ್ತ, ಭೋವಿ ಕಾಲೋನಿ ಮುಲ್ಲಾ ಗಲ್ಲಿ, ಬುತ್ತಿ ಬಸವೇಶ್ವರ ನಗರ ಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ತೊಂದರೆಯಾದ ಕಡೆಯೆಲ್ಲಾ ಸರಕಾರದ ನಿಯಮಾನುಸಾರ ಅನ್ವಯವಾಗುವ ಫಲಾನುಭವಿಗಳಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನೂ ಮಳೆಯ ವಾತಾವರಣ ಮುಂದುವರೆದಿದ್ದು ಬುಧವಾರ ಸುರಿದ ಮಳೆಯು ೫೯.೦೦ ಮಿ.ಮೀಟರ್ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕಲ್ಲೇಶ್ ತಾಳದ, ಅಮೀನುದ್ದಿನ್ ಮುಲ್ಲಾ, ಆಲಂಸಾಬ ಮೋದಿ, ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಇತರರು ಹಾಜರಿದ್ದರು.
